ಭಿನ್ನಾಭಿಪ್ರಾಯ ಇನ್ನೂ ಇದೆ: ಚೀನಾ
ಪರಮಾಣು ಪೂರೈಕೆದಾರರ ಗುಂಪಿಗೆ ಭಾರತ ಸೇರ್ಪಡೆ
ಬೀಜಿಂಗ್, ಜೂ. 20: ಪರಮಾಣು ಪೂರೈಕೆದಾರರ ಗುಂಪಿಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸುವ ವಿಚಾರದಲ್ಲಿ ಗುಂಪಿನ ಸದಸ್ಯರ ನಡುವೆ ಭಿನ್ನಮತ ಮುಂದುವರಿದಿದೆ, ಅದೂ ಅಲ್ಲದೆ ಈ ವಿಷಯ ಈ ವಾರ ಸಿಯೋಲ್‌ನಲ್ಲಿ ನಡೆಯಲಿರುವ ಗುಂಪಿನ ಸಭೆಯ ಕಾರ್ಯಸೂಚಿಯಲ್ಲೂ ಇಲ್ಲ ಎಂದು ಚೀನಾ ಸೋಮವಾರ ಹೇಳಿದೆ.
ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ಗೆ ಭಾರತದ ಸೇರ್ಪಡೆಯನ್ನು ಚೀನಾ ವಿರೋಧಿಸುತ್ತಿಲ್ಲ ಎಂಬುದಾಗಿ ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿಕೆ ನೀಡಿದ ಒಂದು ದಿನದ ಬಳಿಕ ಚೀನಾದಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘‘ಪರಮಾಣು ಪ್ರಸರಣ ನಿಷೇಧ (ಎನ್‌ಪಿಟಿ)ಕ್ಕೆ ಸಹಿ ಹಾಕದ ದೇಶಗಳು ಎನ್‌ಎಸ್‌ಜಿಗೆ ಸೇರ್ಪಡೆಗೊಳ್ಳುವ ವಿಚಾರದಲ್ಲಿ ಗುಂಪಿನ ಸದಸ್ಯರ ನಡುವೆ ಭಿನ್ನಮತ ಈಗಲೂ ಇದೆ ಹಾಗೂ ಪ್ರಸಕ್ತ ಪರಿಸ್ಥಿತಿಯಲ್ಲಿ, ಸಮಾಲೋಚನೆ ಆಧಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಎನ್‌ಎಸ್‌ಜಿ ಮಾತುಕತೆಗಳನ್ನು ಏರ್ಪಡಿಸಲಿದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಹುವ ಚುನ್‌ಯಿಂಗ್ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.
ಭಾರತದ ವಿದೇಶ ಕಾರ್ಯದರ್ಶಿ ಎಸ್. ಜೈಶಂಕರ್ ಜೂನ್ 16 ಮತ್ತು 17ರಂದು ಇಲ್ಲಿಗೆ ನೀಡಿದ ಭೇಟಿ ಹಾಗೂ ಸುಷ್ಮಾ ಸ್ವರಾಜ್‌ರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಹುವ, ಎನ್‌ಎಸ್‌ಜಿಯ ಸಿಯೋಲ್ ಸಮ್ಮೇಳನದ ಕಾರ್ಯಸೂಚಿಯಲ್ಲಿ ಭಾರತವನ್ನು ಗುಂಪಿಗೆ ಸೇರಿಸುವ ವಿಚಾರವಿಲ್ಲ ಎಂದರು.
48 ಸದಸ್ಯರ ಪರಮಾಣು ಪೂರೈಕೆದಾರರ ಗುಂಪಿನ ಸಭೆ ಸಿಯೋಲ್‌ನಲ್ಲಿ ಜೂನ್ 24ರಂದು ನಡೆಯಲಿದೆ.
‘‘ಪರಮಾಣು ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದ ದೇಶಗಳನ್ನು ಎನ್‌ಎಸ್‌ಜಿಗೆ ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದ ವಿಷಯ ಯಾವತ್ತೂ ಎನ್‌ಎಸ್‌ಜಿ ಕಾರ್ಯಸೂಚಿಯಲ್ಲಿ ಒಳಗೊಂಡಿಲ್ಲ ಎಂಬುದನ್ನು ನಾನು ಎಲ್ಲರ ಗಮನಕ್ಕೆ ತರಬಯಸುತ್ತೇನೆ’’ ಎಂದು ಹುವ ನುಡಿದರು.
ಈ ವರ್ಷ ಭಾರತ ಎನ್‌ಎಸ್‌ಜಿ ಸದಸ್ಯತ್ವ ಪಡೆಯುವ ಬಗ್ಗೆ ವಿಶ್ವಾಸವಿದೆ ಎಂಬುದಾಗಿ ಸುಷ್ಮಾ ಸ್ವರಾಜ್ ರವಿವಾರ ಹೇಳಿದ್ದರು.
‘‘ಎನ್‌ಎಸ್‌ಜಿಗೆ ಭಾರತದ ಪ್ರವೇಶವನ್ನು ಚೀನಾ ವಿರೋಧಿಸುತ್ತಿಲ್ಲ. ಮಾನದಂಡ ಮತ್ತು ವಿಧಿವಿಧಾನಗಳ ಬಗ್ಗೆ ಮಾತ್ರ ಅದು ಮಾತನಾಡುತ್ತಿದೆ. ನಮ್ಮ ಎನ್‌ಎಸ್‌ಜಿ ಪ್ರವೇಶಕ್ಕೆ ಚೀನಾ ಬೆಂಬಲ ನೀಡುವಂತೆ ಅದಕ್ಕೆ ಮನವರಿಕೆ ಮಾಡುವ ಬಗ್ಗೆ ವಿಶ್ವಾಸವಿದೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಹೇಳಿದರು.







