ಅನಿವಾಸಿ ಭಾರತೀಯರಿಗೆ ಸಂಕಟ ಬಂದಾಗ ಸುಷ್ಮಾ ಸ್ಮರಣೆ!
ಅಸಹಾಯಕ ಮಗಳಿಗೆ ತಂದೆಯನ್ನು ಮರಳಿಸಿದ ವಿದೇಶಾಂಗ ಸಚಿವೆ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇತ್ತೀಚೆಗೆ ಯುವತಿಯೊಬ್ಬಳಿಗೆ ಅಪ್ಪಂದಿರ ದಿನದಂದು ತನ್ನ ತಂದೆಯನ್ನು ಭೇಟಿಯಾಗುವ ಅವಕಾಶ ಮಾಡಿಕೊಟ್ಟಿದ್ದಾರೆ. ಟ್ವಿಟರ್ ಸಾಮಾಜಿಕ ತಾಣದಲ್ಲಿ ಯುವತಿ ತನ್ನ ಹತಾಶೆಯನ್ನು ಸುಷ್ಮಾ ಜೊತೆಗೆ ಹೇಳಿಕೊಂಡಿದ್ದರು. ಇತ್ತೀಚೆಗೆ 10ನೇ ತರಗತಿ ಪಾಸಾದ ರುಕ್ಮಿಣಿ ಶಂಕರ್ ಹಲವು ಟ್ವೀಟ್ ಹಾಕಿ ತನ್ನ ತಂದೆಯನ್ನು ಭೇಟಿ ಮಾಡಲು ವಿದೇಶಾಂಗ ಸಚಿವೆಯ ಸಹಾಯ ಕೇಳಿದ್ದರು. ಸೌದಿ ಅರೇಬಿಯದಲ್ಲಿ ಒಂದು ಅಪಘಾತದ ಬಳಿಕ ಆಕೆಯ ತಂದೆಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.
@rukminniehoran ಹ್ಯಾಂಡಲ್ ನಿಂದ ರುಕ್ಮಿಣಿ ಮೊದಲು ನಾನು ಅಪ್ರಾಪ್ತ ವಯಸ್ಸಿನವಳು ಮತ್ತು ತಕ್ಷಣವೇ ನಿಮ್ಮ ಸಹಾಯ ಬೇಕಿದೆ ಎಂದು ಮೊದಲ ಟ್ವೀಟ್ ಹಾಕಿದ್ದರು.
ರುಕ್ಮಿಣಿಯ ತಂದೆ ಶಂಕರ ಕುಮಾರ್ ಸಿಂಗ್ ಝಾ ಸೌದಿ ಅರೇಬಿಯದಲ್ಲಿ ಅಪಾಯಕ್ಕೆ ಸಿಲುಕಿದ್ದರು. ವ್ಯಕ್ತಿಯೊಬ್ಬರು ಸಾವಿಗೀಡಾದ ಅಪಘಾತಕ್ಕೆ ಕಾರಣರಾಗಿದ್ದರು. ಝಾ ಅವರು ಹೈಲ್ ವಿಶ್ವವಿದ್ಯಾಲಯದಲ್ಲಿ ಹಣಕಾಸು ವಿಷಯದ ಸಹಾಯಕ ಪ್ರೊಫೆಸರ್ ಆಗಿದ್ದರು. ಮಗಳು ತಂದೆ ಜೊತೆಗೆ ಬೇಸಿಗೆ ರಜೆ ಕಳೆಯಲು ಹೋಗಿದ್ದರು. ಅಪಘಾತದ ನಂತರ ರುಕ್ಮಿಣಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರು. ಜೂನ್ 18ರಂದು ವಿದೇಶಿ ಸಚಿವರನ್ನೂ ಟ್ವೀಟ್ ಮೂಲಕ ಸಂಪರ್ಕಿಸಿದ್ದರು. ಕಾನೂನು ವಿಷಯದಲ್ಲಿ ಯಾರೂ ಜವಾಬ್ದಾರಿ ವಹಿಸುತ್ತಿಲ್ಲ. ಭಾನುವಾರದೊಳಗೆ ರಾಯಭಾರ ಕಚೇರಿ ಪತ್ರ ಕೊಡದೆ ಇದ್ದಲ್ಲಿ ತಂದೆ ಪೊಲೀಸರ ವಶದಲ್ಲೇ ಉಳಿಯುತ್ತಾರೆ ಎಂದು ರುಕ್ಮಿಣಿ ಬರೆದಿದ್ದರು. ರುಕ್ಮಿಣಿ ಮತ್ತು ಹಲವು ಟ್ವಿಟರ್ ಖಾತೆದಾರರಿಂದ ಒತ್ತಡ ಬಂದ ಮೇಲೆ ಸುಷ್ಮಾ ಸ್ವರಾಜ್ ಉತ್ತರ ನೀಡಿ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟರು. ಭಯಪಡಬೇಡ ಮಗು. ನಿಮ್ಮ ತಂದೆ ತಕ್ಷಣವೇ ಬಿಡುಗಡೆಯಾಗಲು ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದು ಸುಷ್ಮಾ ಉತ್ತರಿಸಿದ್ದರು.
ಈ ಸಮಸ್ಯೆ ಕೊನೆಗೆ ಹೇಗೆ ಪರಿಹಾರವಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ತಂದೆ ಬಿಡುಗಡೆಯಾಗಿರುವ ಸುದ್ದಿಯನ್ನು ರುಕ್ಮಿಣಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ನನ್ನ ತಂದೆ ನನ್ನ ಜೊತೆಗಿದ್ದಾರೆ. ಅವರು ಈಗ ಬಿಡುಗಡೆಯಾಗಿದ್ದಾರೆ ಎಂದು ರುಕ್ಮಿಣಿ ಟ್ವೀಟ್ ಮಾಡಿದ್ದಾರೆ, ಅಲ್ಲದೆ ಟ್ವಿಟರ್ ಸಾಮಾಜಿಕ ತಾಣದಲ್ಲಿ ತಮಗೆ ನೆರವಾದ ಎಲ್ಲರಿಗೂ ಧನ್ಯವಾದವನ್ನೂ ಅರ್ಪಿಸಿದ್ದಾರೆ. ಈ ಸುದ್ದಿಗೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್ ಹೀಗೆ ಸಮಸ್ಯೆಯಲ್ಲಿರುವ ಎಲ್ಲಾ ಭಾರತೀಯರಿಗೂ ನೆರವಾಗುವ ಭರವಸೆಯನ್ನೂ ಕೊಟ್ಟರು. ನಿಮ್ಮ ತಂದೆ ಬಿಡುಗಡೆಯಾಗಿರುವುದು ನನಗೆ ಖುಷಿಯಾಗಿದೆ. ಭಾರತೀಯ ರಾಯಭಾರ ಕಚೇರಿ ನಿಮ್ಮ ಮತ್ತು ಎಲ್ಲಾ ಭಾರತೀಯರ ನೆರವಿಗಾಗಿಯೇ ಇದೆ ಎಂದು ಸುಷ್ಮಾ ಬರೆದಿದ್ದಾರೆ.
ಸುಷ್ಮಾ ಸ್ವರಾಜ್ ಟ್ವಿಟರ್ ಮೂಲಕ ನೆರವು ಯಾಚಿಸಿದವರಿಗೆ ಈ ಮೊದಲೂ ಹಲವು ಬಾರಿ ಸಹಾಯ ಮಾಡಿದ್ದಾರೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರ ತರಬೇತುದಾರ ಜರ್ಮನಿಯ ಕೊಲಾಗ್ನೆಯಲ್ಲಿ ತಮ್ಮ ಪಾಸ್ಪೋರ್ಟ್ ಕಳೆದುಕೊಂಡಿದ್ದ ಸಮಯದಲ್ಲಿ ಮತ್ತು 17 ವರ್ಷದ ಬಾಲಕ ಮಷಾಲ್ ಮಹೇಶ್ವರಿಯ ವೈದ್ಯಕೀಯ ಪ್ರವೇಶ ಪರೀಕ್ಷೆಯ ವಿಚಾರದಲ್ಲೂ ಟ್ವಿಟರ್ ದೂರು ಕೇಳಿಯೇ ಸುಷ್ಮಾ ನೆರವು ನೀಡಿದ್ದಾರೆ.
ಕೃಪೆ: www.ndtv.com





