ಚೀನಾದಿಂದ ವಿಶ್ವದ ಅತ್ಯಂತ ಹೆಚ್ಚು ಸಾಮರ್ಥ್ಯದ ಸೂಪರ್ ಕಂಪ್ಯೂಟರ್

ಬೀಜಿಂಗ್: ಚೀನಾ ದೇಶ ಅಭಿವೃದ್ಧಿ ಪಡಿಸಿದ ಹೊಸ ಸೂಪರ್ ಕಂಪ್ಯೂಟರ್ ಒಂದು ವಿಶ್ವದ ಅತ್ಯಂತ ಶಕ್ತಿಶಾಲಿ ಹಾಗೂ ಹೆಚ್ಚು ಸಾಮರ್ಥ್ಯದ ಕಂಪ್ಯೂಟರ್ ಎಂಬ ಹೆಗ್ಗಳಿಕೆ ಪಡೆದಿದೆ.
93 ಪೆಟಫ್ಲಾಪ್ ಸನ್ ವೇ ತೈಹು ಲೈಟ್ ಎಂಬ ಸೂಪರ್ ಕಂಪ್ಯೂಟರನ್ನು ನ್ಯಾಷನಲ್ ಸೂಪರ್ ಕಂಪ್ಯೂಟಿಂಗ್ ಸೆಂಟರ್, ವುಕ್ಸಿ ಇಲ್ಲಿ ಅಳವಡಿಸಲಾಗಿದೆ. ಈ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ 93,000 ಟ್ರಿಲ್ಲಿಯನ್ ಲೆಕ್ಕಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ. ಚೀನಾ ಅಭಿವೃದ್ಧಿ ಪಡಿಸಿರುವ ಈ ಹಿಂದಿನ ಸೂಪರ್ ಕಂಪ್ಯೂಟರ್ ಟಿಯಾನ್ಹೆ -2 ಗಿಂತ ಈ ಕಂಪ್ಯೂಟರ್ ಎರಡು ಪಟ್ಟು ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸುತ್ತದೆಯಲ್ಲದೆ ಅದಕ್ಕಿಂತ ಮೂರು ಪಟ್ಟು ಹೆಚ್ಚು ದಕ್ಷತೆ ಅದಕ್ಕಿದೆ ಎಂದು ಸೋಮವಾರ ಸೂಪರ್ ಕಂಪ್ಯೂಟರುಗಳ ಹೊಸ ಪಟ್ಟಿಯನ್ನು ಬಿಡುಗಡೆಗೊಳಿಸಿದ ಟಾಪ್ 500 ತಿಳಿಸಿದೆ.
ಆಧುನಿಕ ಉತ್ಪಾದನೆ, ಹವಾಮಾನ ವರದಿ, ಡಾಟಾ ಅನಾಲಿಟಿಕ್ಸ್ ಅದರ ಮುಖ್ಯ ಅಪ್ಲಿಕೇಶನ್ ಗಳಾಗಿವೆ. ಈ ಸೂಪರ್ ಕಂಪ್ಯೂಟರಿನಲ್ಲಿ ಸ್ಥಳೀಯವಾಗಿ ತಯಾರಿಸಲಾದ 10.5 ಮಿಲಿಯನ್ ಪ್ರೊಸೆಸಿಂಗ್ ಕೋರ್ ಗಳು ಹಾಗೂ 40,960 ನೋಡ್ ಗಳಿದ್ದು ಅದು ಲೀನಕ್ಸ್ ಆಪರೇಟಿಂಗ್ ಸಿಸ್ಟಂ ಹೊಂದಿದೆ.
ಸೂಪರ್ ಕಂಪ್ಯೂಟರ್ ತಯಾರಿಯಲ್ಲಿ ಚೀನಾ ಅಮೇರಿಕಾವನ್ನು ಹಿಂದಿಕ್ಕಿದ್ದು ಟಾಪ್ 500 ಕಂಪ್ಯೂಟರ್ ಗಳ ಪಟ್ಟಿಯಲ್ಲಿ ಚೀನಾದ 167 ಕಂಪ್ಯೂಟರ್ ಗಳಿದ್ದರೆ, ಅಮೇರಿಕಾದ 165 ಕಂಪ್ಯೂಟರ್ ಗಳಿವೆ. ಟಾಪ್ 500 ರ ಪಟ್ಟಿಯಲ್ಲಿನ ಟಾಪ್ 10 ರಲ್ಲಿ ಅಮೇರಿಕಾದ ನಾಲ್ಕು ಸೂಪರ್ ಕಂಪ್ಯೂಟರ್ ಗಳಿದ್ದರೆ, ಚೀನಾದ ಕಂಪ್ಯೂಟರ್ ಗಳು ಪ್ರಥಮ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ.
ಜಪಾನ್, ಸ್ವಿಝರ್ಲೆಂಡ್, ಜರ್ಮನಿ ಹಾಗೂ ಸೌದಿ ಅರೇಬಿಯಾ ಅಭಿವೃದ್ಧಿ ಪಡಿಸಿದ ಕಂಪ್ಯೂಟರುಗಳೂ ಟಾಪ್ 10 ರಲ್ಲಿ ಸ್ಥಾನ ಪಡೆದುಕೊಂಡಿವೆ.





