ಆಸ್ಕರ್ ರಿಂದ ಬಿಲ್ಲವ ಸಮುದಾಯಕ್ಕೆ ಮೋಸ! ಬಿಲ್ಲವ ಮಹಾಮಂಡಲ ಆರೋಪ

ಕಾಂಗ್ರೆಸ್ ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ರವರು ಬಿಲ್ಲವ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ದ.ಕ. ಜಿಲ್ಲಾ ಬಿಲ್ಲವ ಮಹಾಮಂಡಲ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ ಬಿಲ್ಲವ ಮಹಾಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳ್ , ಬಿಲ್ಲವರಲ್ಲಿ ಸಚಿವ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿಗಳಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಬಿಲ್ಲವರಿಗೆ ಗಾಯ ಮಾಡಿದವರನ್ನು ಮುಂದಿನ ಚುನಾವಣೆಯಲ್ಲಿ ಮಾಯಾ ಮಾಡುವ ಸಾಮರ್ಥ್ಯ ಬಿಲ್ಲವರಿಗೆ ಇದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ ಸವಾಲು ಹಾಕಿದ್ದಾರೆ.
ಅವಿಭಜಿತ ದ.ಕ ಜಿಲ್ಲೆಯಲ್ಲಿ 8 ಲಕ್ಷ ಬಿಲ್ಲವರಿದ್ದಾರೆ. ಹಾಗಿದ್ದರೂ ಸಚಿವ ಸ್ಥಾನಕ್ಕೆ ಬಿಲ್ಲವರನ್ನು ಕಡೆಗಣಿಸಲಾಗಿದೆ. ಬಾಕಿ ಎಲ್ಲಾ ಸಮುದಾಯದವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಬಿಲ್ಲವರಿಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಕ್ರೈಸ್ತ ಸಮುದಾಯವರನ್ನು ಎಂಎಲ್ಸಿ, ಎಂಎಲ್ಎ ಮಾಡಲಾಗಿದೆ. ಬಿಲ್ಲವರಲ್ಲಿ ವಸಂತ ಬಂಗೇರ ಸಮರ್ಥ ಅಭ್ಯರ್ಥಿಯಲ್ಲವೇ, ಅಲ್ಲದೆ ಗೋಪಾಲ ಪೂಜಾರಿಯವರಿಗೆ ಸಚಿವ ಸ್ಥಾನ ಕೊಡಬಾರದಿತ್ತೇ ಎಂದು ಪ್ರಶ್ನಿಸಿದರು.
ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಖರ್ಗೆಯವರ ಪುತ್ರರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಬಿಲ್ಲವರಿಗೆ ಯಾಕೆ ನೀಡಲಿಲ್ಲ. ಈ ಬಗ್ಗೆ ಆಸ್ಕರನ್ನು ವಿಚಾರಿಸಿದಾಗ ನನ್ನ ಪಾತ್ರ ಇಲ್ಲ ಎಂದಿದ್ದಾರೆ. ಆದರೆ ಇದೆಲ್ಲಾ ಇವರದ್ದೇ ಕೆಲಸ ಎಂದು ಹರಿಕೃಷ್ಣ ಬಂಟ್ವಾಳ್ ಆರೋಪಿಸಿದ್ದಾರೆ.
ಹಿರಿಯ ನಾಯಕ ಜನಾರ್ದನ ಪೂಜಾರಿಯವರು ಪಕ್ಷದಲ್ಲಿ ಎಲ್ಲರನ್ನು ಒಗ್ಗೂಡಿಸುವ ಮೂಲಕ ಸೂಜಿಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೆ, ಈಗಿನ ಕಾಲದ ನಾಯಕರು ಪರೋಕ್ಷವಾಗಿ ಆಸ್ಕರರನ್ನು ಉಲ್ಲೇಖಿಸುತ್ತಾ ಪಕ್ಷವನ್ನು ವಿಭಜಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪ್ರಭಾಕರ್, ಗೀತಾಂಬರ ಹೆರಾಜೆ, ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್ ಉಪಸ್ಥಿತರಿದ್ದರು.







