ಹಜ್, ಉಮ್ರಾ ಯಾತ್ರಾರ್ಥಿಗಳ ನೆರವಿಗೆ ನೂತನ ಇ-ಬ್ರೇಸ್ಲೆಟ್

ಮಕ್ಕಾ: ಹಜ್, ಉಮ್ರಾ ಯಾತ್ರಿಗಳ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಇಲೆಕ್ಟ್ರಾನಿಕ್ ಬ್ರೇಸ್ಲೆಟ್ ಒಂದನ್ನು ಹಜ್ ಮತ್ತು ಉಮ್ರಾ ಸಚಿವಾಲಯ ಬಿಡುಗಡೆಗೊಳಿಸಿದೆ. ಈ ಬ್ರೇಸ್ಲೆಟ್ ಯಾತ್ರಾರ್ಥಿಗಳ ವೀಸಾ ಸಂಖ್ಯೆ, ಪಾಸ್ ಪೋರ್ಟ್ ಸಂಖ್ಯೆ, ವಿಳಾಸ ಮತ್ತು ಅವರು ಅವರು ಸೌರಿ ಅರೇಬಿಯಾ ದೇಶವನ್ನು ಎಲ್ಲಿಂದ ಪ್ರವೇಶಿಸಿದ್ದಾರೆಂಬುದರ ಬಗ್ಗೆ ಮಾಹಿತಿ ನೀಡುತ್ತದೆ.
ಯಾತ್ರಾರ್ಥಿಗಳ ನೋಂದಾಯಿತ ಸೇವಾ ಪೂರೈಕೆದಾರರು, ಅವರು ಮಕ್ಕಾ ಅಥವಾ ಮದೀನಾದಲ್ಲಿ ವಾಸಿಸುವ ಸ್ಥಳ ಅಥವಾ ಪುಣ್ಯ ಸ್ಥಳಗಳು, ಅವರಿಗೆ ಸಹಾಯ ಮಾಡುವವರ ದೂರವಾಣಿ ಸಂಖ್ಯೆಗಳ ಮಾಹಿತಿ ಈ ಸಾಧನದಲ್ಲಿರುತ್ತದೆ.
ಈ ಬ್ರೇಸ್ಲೆಟ್ ಸಹಾಯದಿಂದ ಜನಜಂಗುಳಿಯಲ್ಲಿ ಕಳೆದು ಹೋಗುವ ಯಾತ್ರಾರ್ಥಿಗಳು ಹಾಗೂ ಅರೆಬಿಕ್ ಭಾಷೆ ತಿಳಿಯದವರ ಬಗ್ಗೆ ಮಾಹಿತಿ ಸಂಗ್ರಹಿಸುವುದು ಸರಕಾರ ಹಾಗೂ ಖಾಸಗಿ ಸೇವಾ ಪೂರೈಕೆದಾರರಿಗೆ ಸುಲಭವಾಗಲಿದೆಯೆಂದು ಸಚಿವಾಲಯದ ಉಮ್ರಾ ವ್ಯವಹಾರಗಳ ವಿಭಾಗದ ಕಾರ್ಯದರ್ಶಿ ಈಸಾ ಮೊಹಮ್ಮದ್ ರಾವಸ್ ಹೇಳಿದ್ದಾರೆ.
ಈ ಬ್ರೇಸ್ಲೆಟ್ ಗಳನ್ನು ವಿನ್ಯಾಸಗೊಳಿಸುವ ಮುನ್ನ ಸಚಿವಾಲಯವು ಟ್ರಾವೆಲ್ ಏಜಂಟರು ಹಾಗೂ ಉಮ್ರಾ ಕಂಪೆನಿಗಳ ಸಹಾಯವನ್ನೂ ಪಡೆದಿದೆಯೆಂದು ಅವರು ತಿಳಿಸಿದ್ದಾರೆ. ಸಚಿವಾಲಯದ ಉದ್ಯೋಗಿಗಳು ಹಾಗೂ ಸುರಕ್ಷಾ ಏಜನ್ಸಿಗಳು ಯಾತ್ರಾರ್ಥಿಗಳ ಬಗ್ಗೆ ಮಾಹಿತಿಯನ್ನು ತಮ್ಮ ಸ್ಮಾರ್ಟ್ ಫೋನ್ ಮುಖಾಂತರ ಪಡೆಯಬಹುದಾಗಿದೆ. ಈ ಕಡಿಮೆ ಬೆಲೆಯ, ಹಗುರ ಬ್ರೇಸ್ಲೆಟ್ ನೀರು ಮತ್ತು ಗೀರು ನಿರೋಧಕವೂ ಆಗಿದೆ.







