ಸಿರಿಯ ಅಧ್ಯಕ್ಷ ಬಶರುಲ್ ಅಸದ್ ನೆರವಿಗೆ ಇನ್ನಷ್ಟು ಸೈನಿಕರನ್ನು ಕಳುಹಿಸುವೆ: ಹಿಝ್ಬುಲ್ಲಾ

ಬೈರೂತ್, ಜೂನ್ 21: ಸಿರಿಯ ಅಧ್ಯಕ್ಷ ಬಶರುಲ್ ಅಸದ್‌ರ ಸೈನ್ಯಕ್ಕೆ ನೆರವಾಗಲು ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಸೈನಿಕರನ್ನು ತಾನು ಕಳುಹಿಸಲು ಸಿದ್ಧವೆಂದು ಲೆಬನಾನ್‌ನ ಹಿಝ್ಬುಲ್ಲಾ ಘೋಷಿಸಿದೆ. ಸಿರಿಯದ ಯುದ್ಧದಲ್ಲಿ ಈವರೆಗೂ ಹಿಝ್ಬುಲ್ಲಾದ ಹೆಚ್ಚು ಸೈನಿಕರು ಪಾಲ್ಗೊಂಡಿಲ್ಲ ಎಂದು ಹಿಝ್ಬುಲ್ಲಾ ಎಕ್ಸಿಕ್ಯೂಟಿವ್ ಕೌನ್ಸಿಲ್‌ನ ಉಪಾಧ್ಯಕ್ಷ ನಬೀಲ್ ಫಾರೂಕ್ ಹೇಳಿದ್ದಾರೆ. ಸಿರಿಯದ ಸಶಸ್ತ್ರ ಪ್ರತಿಪಕ್ಷ ಪಡೆಮುತ್ತಿಗೆ ಹಾಕಿರುವ ಕಫ್ರಿಯ, ಅಲ್ಫೋಅದ ಜನರ ಸಂರಕ್ಷಣೆಗೆ ತಾನು ಅತೀವ ಜಾಗರೂಕತೆ ವಹಿಸಲಿದ್ದೇನೆ ಎಂದು ಹಿಝ್ಬುಲ್ಲಾ ಹೇಳಿದೆ. ಇಲ್ಲಿ ಶಿಯಾಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.
ಸಿರಿಯದಲ್ಲಿ ಕಳೆದ ವಾರ 25ಕ್ಕೂ ಅಧಿಕ ಹಿಝ್ಬುಲ್ಲಾ ಹೋರಾಟಗಾರರು ಹತ್ಯೆಯಾಗಿದ್ದಾರೆ. 2013ರಲ್ಲಿ ಹಿಂಸ್‌ನ ಖಝೀರ್ ಪ್ರದೇಶದಲ್ಲಿ ಯುದ್ಧ ಆರಂಭವಾದ ಬಳಿಕ ಒಂದೇ ವಾರದಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ಹತರಾಗಿರುವ ಮೊದಲ ಘಟನೆಯಾಗಿದೆ. ಸಿರಿಯ ಯುದ್ಧದಲ್ಲಿ ಭಾಗವಹಿಸಿರುವ ಹಿಝ್ಬುಲ್ಲಾ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಹಿಂದೆ ಟೀಕೆಗಳು ವ್ಯಕ್ತವಾಗಿದ್ದವು.





