10ನೇ ತರಗತಿ ಪರೀಕ್ಷೆಯಲ್ಲಿ 47ನೇ ಬಾರಿ ಫೇಲ್ ಆದ 82 ವರ್ಷದ ವಿದ್ಯಾರ್ಥಿ

ನವದೆಹಲಿ: ಜೂನ್ 19 ರಂದು ರಾಜಸ್ಥಾನ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟವಾದಾಗ 82 ವರ್ಷದ ಶಿವ ಚರಣ್ ಮತ್ತೆ ಫೇಲಾಗಿದ್ದರು. ಅವರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು ಇದು ಮೊದಲನೇ ಅಥವಾ ಎರಡನೇ ಬಾರಿಯಲ್ಲ, ಬದಲಾಗಿ 47 ನೇ ಬಾರಿ.
ಮದುವೆಯಾಗಬೇಕೆಂಬ ಅವರ ಕನಸನ್ನು ಅವರ ಅನುತ್ತೀರ್ಣತೆ ಮತ್ತೊಮ್ಮೆ ಭಂಗಗೊಳಿಸಿದೆ. ತಮ್ಮ ಯೌವ್ವನದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣನಾಗದೆ ಮದುವೆಯಾಗುವುದಿಲ್ಲವೆಂದು ತೀರ್ಮಾನಿಸಿದ್ದರು. ``ಪರೀಕ್ಷೆಯಲ್ಲಿ ಪಾಸಾದರೆ ಮದುವೆಯಾಗುವ ಅವಕಾಶವೂ ನನ್ನದಾಗುವುದು,''ಎನ್ನುವ ಮಹದಾಸೆ ಈ 82ರ ವೃದ್ಧನದು.
ಶಿಯೋಜಿರಾಮ್ ಅಥವಾ ಪಪ್ಪು ಎಂದೇ ಜನಪ್ರಿಯರಾಗಿರುವ ಈತ ರಾಜಸ್ಥಾನದ ಬೆಹ್ರೋರ್ ಸಮೀಪದ ಕೊಹಾರಿ ಗ್ರಾಮದವರಾಗಿದ್ದು ಕಳೆದ 47 ವರ್ಷಗಳಿಂದ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ``1995 ರಲ್ಲಿ ನಾನು ಗಣಿತ ಹೊರತುಪಡಿಸಿ ಎಲ್ಲಾ ವಿಷಯಗಳಲ್ಲೂ ತೇರ್ಗಡೆಗೊಂಡಿದ್ದೆ,'' ಎಂದು ಹೇಳುವ ಅವರು ಈ ಬಾರಿ ಯಾವ ವಿಷಯದಲ್ಲೂ ಉತ್ತೀರ್ಣರಾಗಿಲ್ಲ. ಕೆಲ ವಿಷಯಗಳಲ್ಲಂತೂ ಅವರಿಗೆ ಸೊನ್ನೆ ಅಂಕಗಳು ದೊರೆತಿವೆ.
ಅವರ ವಯಸ್ಸಿನ ಕಾರಣದಿಂದ ಅವರ ದೃಷ್ಟಿ ಮಂದವಾಗಿದ್ದು, ಸರಿಯಾಗಿ ಕಿವಿ ಕೇಳಿಸುತ್ತಿಲ್ಲ ಹಾಗೂ ನಡೆದಾಡಲೂ ಕಷ್ಟವಾಗುತ್ತಿದೆ. ``ನಾನು ಬದುಕುಳಿಯುವ ತನಕ ಪರೀಕ್ಷೆ ಬರೆಯುತ್ತೇನೆ,''ಎಂದು ಹೇಳುತ್ತಾರೆ ಶಿವಚರಣ್.
ತಮ್ಮ ಪ್ರಥಮ ಬೋರ್ಡ್ ಪರೀಕ್ಷೆಯನ್ನು 1969ರಲ್ಲಿ ಬರೆದ ಅವರು ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನೇ ತಮ್ಮ ಜೀವನದ ಉದ್ದೇಶವನ್ನಾಗಿಸಿದ್ದಾರೆ.
ಸರಕಾರ ನೀಡುವ ವೃದ್ಧರ ಪಿಂಚಣಿಯನ್ನೇ ಅವಲಂಬಿಸಿರುವ ಶಿವಚರಣ್ ತಮ್ಮ ಗ್ರಾಮದ ದೇವಸ್ಥಾನವೊಂದರಲ್ಲಿ ವಾಸಿಸುತ್ತಿದ್ದಾರೆ.







