ಇಸ್ರೇಲ್: ಸೇನೆ ಸೇರಲು ನಿರಾಕರಿಸಿದ ಯಹೂದಿ ಯುವತಿಗೆ ಜೈಲು!

ಟೆಲ್‌ಅವಿವ್,ಜೂನ್ 21: ಇಸ್ರೇಲ್ ಸೈನ್ಯಕ್ಕೆ ಸೇರಲು ನಿರಾಕರಿಸಿದ ತಾಹಿರ್ ಕಮಿನರ್ ಎಂಬ ಯಹೂದಿ ಯುವತಿಗೆ ನಲ್ವತ್ತೈದು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸೈನಿಕ ಸೇವೆಗೆ ನಿರಾಕರಿಸಿದ್ದಕ್ಕಾಗಿ ಇದು ಆರನೆ ಬಾರಿ ಅವರಿಗೆ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಈಹಿಂದೆ ಅವರಿಗೆ 125 ದಿನಗಳ ಜೈಲುಶಿಕ್ಷೆಯನ್ನು ಅನುಭವಿಸಬೇಕಾಗಿ ಬಂದಿತ್ತು ಎಂದು ಇಸ್ರೇಲಿ ಪತ್ರಿಕೆ ಹಾರೈಟ್ಸ್ ವರದಿಮಾಡಿದೆ.
ಶಾಂತಿಯಲ್ಲಿ ವಿಶ್ವಾಸವಿದ್ದುದರಿಂದ ತಾನು ಸೇನೆಯಲ್ಲಿ ಸೇವೆ ಸಲ್ಲಿಸುವುದಕ್ಕೆ ನಿರಾಕರಿಸಿದೆ ಎಂದು ಕಮಿನರ್ ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ. ಯಾವ ಅತಿಕ್ರಮಣವೂ ನಡೆಯುವುದಿಲ್ಲ ಎಂದು ಜಗತ್ತನ್ನು ನಂಬಿಸಲಿಕ್ಕಾಗಿ ಇಸ್ರೇಲ್ ಆಡಳಿತಕೂಟ ಹಾಗೂ ಸೆನೆಟ್ ಸದಸ್ಯರು ಶ್ರಮಿಸುತ್ತಿದ್ದಾರೆ. ಅತಿಕ್ರಮಣ ಇಲ್ಲವೆಂದು ಹೇಳುವುದಾದರೆ ವೆಸ್ಟ್‌ಬ್ಯಾಂಕ್ ನಿಯಂತ್ರಿಸುವ ಸರಕಾರದ ಕ್ರಮದ ಉದ್ದೇಶ ಎಂದು ಕಮಿನರ್ ಪ್ರಶ್ನಿಸಿದ್ದಾರೆ. ಫೆಲೆಸ್ತೀನಿ ಪ್ರದೇಶಗಳಲ್ಲಿ ಇಸ್ರೇಲ್‌ನ ಸೈನ್ಯ ನಿರ್ವಹಿಸುವ ದೌತ್ಯವೇನು? ಅತಿಕ್ರಮಣ ಹಾಗೂ ಅದರ ಅಸ್ತಿತ್ವದ ಕುರಿತು ತಾನು ಸಹಮತ ಹೊಂದಿಲ್ಲ ಎಂದು ಕಮಿನರ್ ಹೇಳಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಪ್ರಚಾರ ದೊರಕಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರತಿಕ್ರಿಯೆಗಳು ಬಂದಿವೆ.





