‘ಓಂ’ ಚಿಹ್ನೆಯ ಚಪ್ಪಲಿ ಮಾರುತ್ತಿದ್ದಾತ ದೈವನಿಂದನೆ ಕಾನೂನಿನಡಿ ಬಂಧನ

ಇಸ್ಲಾಮಾಬಾದ್, ಜೂ. 21: ಹಿಂದೂ ಧರ್ಮದ ಪವಿತ್ರ ಸಂಕೇತವಾಗಿರುವ ‘ಓಂ’ ಚಿಹ್ನೆಯಿರುವ ಚಪ್ಪಲಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪಾಕಿಸ್ತಾನಿ ಪೊಲೀಸರು ಕಠಿಣ ದೇವನಿಂದನೆ ಆರೋಪದಡಿ ಬಂಧಿಸಿದ್ದಾರೆ.
ದೇಶದ ದಕ್ಷಿಣದ ಪಟ್ಟಣ ತಂಡೊ ಆದಂನಲ್ಲಿರುವ ಚಪ್ಪಲಿ ಅಂಗಡಿಯ ಮಾಲೀಕ ಜಹಾನ್‌ಝೇಬ್ ಖಾಸ್ಖೇಲಿಯನ್ನು ಪೊಲೀಸರು ಸೋಮವಾರ ಬಂಧಿಸಿದರು ಹಾಗೂ ‘ಓಂ’ ಚಿಹ್ನೆಯನ್ನು ಹೊಂದಿರುವ ಚಪ್ಪಲಿಗಳನ್ನು ಪೊಲೀಸರು ವಶಪಡಿಸಿಕೊಂಡರು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಫಾರೂಕ್ ಅಲಿ ತಿಳಿಸಿದರು.
ಅಂಗಡಿ ಮಾಲೀಕನನ್ನು ಶಿಕ್ಷಿಸಬೇಕು ಎಂಬುದಾಗಿ ಹಿಂದೂ ಸಮುದಾಯದ ನಾಯಕರು ಒತ್ತಾಯಿಸಿದ್ದಾರೆ.
‘‘ದೇವನಿಂದನೆ ಕಾನೂನಿನಡಿ ಆರೋಪಿಯನ್ನು ಶಿಕ್ಷಿಸುವಲ್ಲಿ ಸರಕಾರ ಮುತುವರ್ಜಿ ವಹಿಸಬೇಕು’’ ಎಂದು ಪಾಕಿಸ್ತಾನಿ ಹಿಂದೂ ಕೌನ್ಸಿಲ್‌ನ ನಾಯಕ ರಮೇಶ್ ಕುಮಾರ್ ವಂಕ್ವಾನಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ತಂಡೊ ಆದಂ ಪಟ್ಟಣ ಸಿಂದ್ ಪ್ರಾಂತದಲ್ಲಿದೆ. ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಸುಮಾರು 30 ಲಕ್ಷ ಹಿಂದೂಗಳ ಪೈಕಿ ಹೆಚ್ಚಿನವರು ಸಿಂದ್‌ನಲ್ಲಿ ವಾಸಿಸುತ್ತಿದ್ದಾರೆ.
ಅಪರಾಧ ಸಾಬೀತಾದರೆ ಅಂಗಡಿ ಮಾಲೀಕನು ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡವನ್ನು ಎದುರಿಸುತ್ತಾನೆ.







