ಕಾಂಗ್ರೆಸ್ ನನ್ನನ್ನು ಬಳಸಿ ಕೈಬಿಟ್ಟಿದೆ:ಖಮರುಲ್ ಇಸ್ಲಾಂ

ಬೆಂಗಳೂರು, ಜೂ.21: ನಾನು ರಾಜಕಾರಣಕ್ಕೆ ಬಂದು 40 ವರ್ಷಗಳಾಗಿವೆ. ಬಳ್ಳಾರಿ, ಬೀದರ್ ಚುನಾವಣೆಯ ವೇಳೆ ಕಾಂಗ್ರೆಸ್‌ಗೆ ನನ್ನ ನೆನಪಾಗುತ್ತದೆ. ಇದೀಗ ಕಾಂಗ್ರೆಸ್ ನನ್ನನ್ನು ಚೆನ್ನಾಗಿ ಬಳಸಿಕೊಂಡು ಕೈಬಿಟ್ಟಿದೆ’’ ಎಂದು ಕಾಂಗ್ರೆಸ್‌ನ ಹಿರಿಯ ಧುರೀಣ ಖಮರುಲ್ ಇಸ್ಲಾಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ಸಚಿವ ಸಂಪುಟ ಪುನರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ, ಪುನಾರಚನೆ ಮೊದಲು ನಾನು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೆ. ಆಗ ಅವರು ನನ್ನನ್ನು ಸಂಪುಟದಿಂದ ಕೈಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು. ಸಂಪುಟದಿಂದ ನನ್ನನ್ನು ಕೈಬಿಟ್ಟು ತನ್ವೀರ್ ಸೇಠ್ ಹೆಸರು ಶಿಫಾರಸು ಮಾಡಿದ್ದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ. ನನಗೆ ಸಚಿವ ಸ್ಥಾನ ಕೈತಪ್ಪಲು ಅವರೇ ಕಾರಣ. ಸೇಠ್ ಬಗ್ಗೆ ಯಾವುದೇ ದ್ವೇಷವಿಲ್ಲ. ಹೈಕಮಾಂಡ್‌ಗೆ ನನ್ನ ಬಗ್ಗೆ ತಪ್ಪು ಮಾಹಿತಿ ನೀಡಿದ್ದು ಯಾರು ಎಂದು ಗೊತ್ತಿಲ್ಲ. ನನ್ನನ್ನು ಕೈಬಿಟ್ಟಿರುವುದಕ್ಕೆ ಉತ್ತರ ಕರ್ನಾಟಕದ ಎಲ್ಲ ವರ್ಗದ ಜನರಿಗೂ ನೋವಾಗಿದೆ’’ ಎಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇಸ್ಲಾಂ ಹೇಳಿದ್ದಾರೆ.





