ಧರ್ಮಸ್ಥಳ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಬೆಳ್ತಂಗಡಿ, ಜೂ.21: ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದೊಂದಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಯೋಗದ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ನಡೆಸಬೇಕು. ಯೋಗಾಭ್ಯಾಸವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜೀವ್‌ಗಾಂಧಿ ಆರೋಗ್ಯ ವಿ.ವಿ.ಯ ಕುಲಪತಿ ಡಾ.ಕೆ.ಎಸ್.ಎಸ್. ರವೀಂದ್ರನಾಥ್ ಹೇಳಿದರು.
ಅವರು ಧರ್ಮಸ್ಥಳದಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾನಸಿಕ ಖಿನ್ನತೆ, ರಕ್ತದೊತ್ತಡ, ಮಧುಮೇಹ ಮೊದಲಾದ ರೋಗಗಳನ್ನು ಔಷಧಿ ಇಲ್ಲದೆ ಯೋಗಾಭ್ಯಾಸದಿಂದ ಶಮನಗೊಳಿಸಬಹುದು. ವೃತ್ತಿಪರಯೋಗ ಪಟುಗಳಿಂದ ತರಬೇತಿ ಪಡೆದು ನಿಯಮಿತವಾಗಿ ಯೋಗಾಭ್ಯಾಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಪ್ರಕೃತಿ ಚಿಕಿತ್ಸಾ ಕಾಲೇಜುಗಳಿಗೆ ಹೆಚ್ಚಿನ ಬೇಡಿಕೆ
ರಾಜ್ಯದಲ್ಲಿ ಈಗಾಗಲೇ ಮೂರು ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜುಗಳಿದ್ದು ಉಜಿರೆ ಕಾಲೇಜು ಶ್ರೇಷ್ಠ ಗುಣಮಟ್ಟ ಹಾಗೂ ಮಾನ್ಯತೆ ಹೊಂದಿದೆ ಎಂದು ಶ್ಲಾಘಿಸಿ ಅಭಿನಂದಿಸಿದರು.ಮುಂದಿನ ಶೈಕ್ಷಣಿಕ ವರ್ಷದಿಂದ ಇನ್ನೊಂದು ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಾರಂಭಿಸಲಾಗುವುದು ಎಂದು ಅವರು ಪ್ರಕಟಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಈಗಾಗಲೆ ಜಿಲ್ಲಾ ಕೇಂದ್ರಗಳಲ್ಲಿ ಯೋಗ ಸಂಗಮದ ಮೂಲಕ ಯೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಧರ್ಮಸ್ಥಳದ ವತಿಯಿಂದ ಯೋಗದ ಪ್ರಚಾರಕ್ಕೆ ಇನ್ನೂ ಹೆಚ್ಚಿನ ಕಾರ್ಯಕ್ರಮ ರೂಪಿಸಲಾಗುವುದು. ಶಾಲೆಗಳಲ್ಲಿ ಮೂರು ಸಾವಿರ ಯೋಗ ಶಿಕ್ಷಕರನ್ನು ನೇಮಿಸಲಾಗಿದೆ ಎಂದರು.
ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆಯುಷ್ಯ ಮತ್ತು ಆರೋಗ್ಯ ವೃದ್ಧಿಯೊಂದಿಗೆ ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳಬಹುದು. ವಯಸ್ಸಾದವರು ಕೂಡಾ ಯೋಗಭ್ಯಾಸದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ರೋಗ ನಿರೋಧಕ ಶಕ್ತಿ ವರ್ಧನೆಯೊಂದಿಗೆ ವೈದ್ಯರಿಂದ ದೂರ ಇರಬಹುದು. ನಮ್ಮ ಬದುಕಿನಲ್ಲಿ ಯೋಗವನ್ನು ದೀಕ್ಷೆಯಾಗಿ ಸ್ವೀಕರಿಸಬೇಕು ಎಂದು ಹೆಗ್ಗಡೆ ಸಲಹೆ ನೀಡಿದರು.
ಮಾಜಿ ಸಚಿವ ಕೆ.ಅಭಯಚಂದ್ರಜೈನ್ ಮಾತನಾಡಿ, ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ನೇತೃತ್ವದಲ್ಲಿ ಎಲ್ಲಾ ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಯೋಗಾಭ್ಯಾಸವನ್ನು ಕಡ್ಡಾಯಗೊಳಿಸಲಾಗಿದೆ. ದೇಶದ ಎಲ್ಲಾ ವಿ.ವಿ.ಗಳಲ್ಲಿ ಇದನ್ನು ಅನುಸರಿಸಬೇಕು ಎಂದರು.
ಮಹಿಳಾ ಅಭಿವೃದ್ಧಿ ನಿಗಮದ ಆಡಳಿತ ನಿರ್ದೇಶಕ ಕೆ.ಎನ್. ವಿಜಯಪ್ರಕಾಶ್ ಮಾತನಾಡಿ, ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಯುವಜನತೆಯ ಸಬಲೀಕರಣಕ್ಕಾಗಿ ಯೋಗಾಭ್ಯಾಸ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಸಲಹೆ ನೀಡಿದರು. ದೈಹಿಕ ಹಾಗೂ ಮಾನಸಿಕ ನಿಗ್ರಹಕ್ಕೆ ಯೋಗವನ್ನು ತಪಸ್ಸಿನಂತೆ ದೃಢಸಂಕಲ್ಪದಿಂದ ನಿತ್ಯವೂ ಸದುಪಯೋಗ ಮಾಡಬೇಕು ಎಂದು ಅವರು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ನಿರ್ದೇಶಕ ಅರುಣ್‌ಕುಮಾರ್ ಎನ್. ಪೂಜಾರ್ ಮಾತನಾಡಿ, ಯುವಜನತೆ ದೇಶದ ಪ್ರಗತಿಗಾಗಿ ಅಮೂಲ್ಯ ಸೇವೆ ಮತ್ತು ತ್ಯಾಗ ಮಾಡಬೇಕು. ಯೋಗಾಭ್ಯಾಸ ಅನುಭವ ಶಾಸ್ತ್ರವಾಗಿದ್ದು ಮುಂದಿನ ವರ್ಷ ಕಾಲೇಜುಗಳಲ್ಲಿ ಯೋಗವನ್ನು ಐಚ್ಛಿಕ ವಿಷಯವನ್ನಾಗಿ ಬೋಧಿಸಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮುಕ್ತೇಸರ ವಿಜಯರಾಘವ ಪಡುವೆಟ್ನಾಯ ಹಾಗೂ ಇತರರು ಉಪಸ್ಥಿತರಿದ್ದರು. ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು.ಡಾ. ಶಶಿಕಾಂತ್ ಜೈನ್ ವಂದಿಸಿದರು. ಡಾ.ಮೇಘ ಕಾರ್ಯಕ್ರಮ ನಿರೂಪಿಸಿದರು.







