ಯಾರೂ ಉಳಿಯಲಿಲ್ಲ...
ಕುಂದಾಪುರ ಭೀಕರ ದುರಂತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ಆಂಬುಲೆನ್ಸ್ ಸೇವೆಯ ಇಬ್ರಾಹೀಂ ಗಂಗೊಳ್ಳಿ ಕಂಡಿದ್ದು

ಇಂದು ಬೆಳಗ್ಗೆ ಗಂಟೆ 9:15. ಗಂಗೊಳ್ಳಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಜ್ಯೋತಿ ಇವರಿಂದ ಆಪತ್ಭಾಂಧವ ಆಂಬ್ಯುಲೆನ್ಸ್ನ ತುರ್ತು ದೂರವಾಣಿ ಸಂಖ್ಯೆ 9741831418ಕ್ಕೆ ಕರೆ ಬಂತು. ರಿಸೀವ್ ಮಾಡಿದೆ. ಅಷ್ಟರಲ್ಲಿ ಆ ಕಡೆಯಿಂದ ದ್ವನಿ ಬಂತು. ಇಬ್ರಾಹೀಂ ಭಾಯಿ, ತ್ರಾಸಿ ಸಮೀಪ ಮೂವಾಡಿ ಕ್ರಾಸಲ್ಲಿ ಶಾಲಾ ಮಕ್ಕಳ ವಾಹನ ಆಕ್ಸಿಡೆಂಟ್ ಆಗಿದೆ. ಅರ್ಜಂಟ್ ಆಂಬ್ಯುಲೆನ್ಸ್ ತಕೊಂಡು ಬನ್ನಿ ಅಂತ.
ಹೆಡ್ ಲೈಟ್ ಹಾಗೂ ಸೈರನ್ ಹಾಕಿ ಕೂಡಲೇ ಗಂಗೊಳ್ಳಿಯಿಂದ ಹೊರಟೆ. ಅಷ್ಟರಲ್ಲಿ ಮತ್ತೆ ಕರೆ ಬಂತು. ದೊಡ್ಡ ಆಕ್ಸಿಡೆಂಟ್, ಎರಡು ಮೂರು ಆಂಬ್ಯುಲೆನ್ಸ್ ಬರಲಿ ಅಂತ. ಇನ್ನೊಂದು ಆಂಬ್ಯುಲೆನ್ಸ್ ಕೂಡಾ ಹೊರಟಿತು. ನಾನು 2-3 ನಿಮಿಷದಲ್ಲಿ ಸ್ಥಳಕ್ಕೆ ತಲುಪಿದೆ. ಒಂದು ಕಡೆಯಿಂದ ಮಳೆ ಬೇರೆ. ರಸ್ತೆಯ ಮೇಲೆ ಮೂರು ಮಕ್ಕಳನ್ನು ಮಲಗಿಸಲಾಗಿತ್ತು. ಬೇರೆ ಯಾವುದೇ ಸನ್ನಿವೇಶ ಅಲ್ಲಿನದ್ದು ಗೊತ್ತಿಲ್ಲ. ತಡ ಮಾಡದೆ ಮಕ್ಕಳನ್ನು ಹಾಗೂ ಕಾರು ಚಾಲಕನನ್ನು ಆಂಬ್ಯುಲೆನ್ಸ್ಗೆ ಹಾಕಿ ಗೆಳೆಯ ಸುಲ್ತಾನ್ನೊಂದಿಗೆ ಕುಂದಾಪುರದ ಕಡೆ ಹೊರಟೆ.
ಚಿನ್ಮಯಿ ಆಸ್ಪತ್ರೆಗೆ ಮೊದಲು ಇವರನ್ನು ಕರೆದುಕೊಂಡು ಹೋದೆ. ಅಲ್ಲಿ ನೋಡಿದಾಗ ಮತ್ತೂ ಆರೆಂಟು ಮಕ್ಕಳು ಇದ್ದರು. ವೈದ್ಯರು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಮಣಿಪಾಲಕ್ಕೆ ಕರೆದುಕೊಂಡು ಹೋಗಬೇಕೆಂದರು. ಪುನಃ ಅವರನ್ನು ಆಂಬ್ಯುಲೆನ್ಸ್ನಲ್ಲಿ ಮಣಿಪಾಲ ಆಸ್ಪತ್ರೆಗೆ ಹೋದೆ. ನನ್ನ ನಂತರ ಸಾಲು ಸಾಲಾಗಿ ಮತ್ತೆ 5 ಆಂಬ್ಯುಲೆನ್ಸ್ಗಳು ಬಂದವು. ಕೆಲವೇ ನಿಮಿಷದಲ್ಲಿ ಸುದ್ದಿ ಬಂತು. 4 ಸಾವು, 6 ಸಾವು, ಕೊನೆಯದಾಗಿ 1 ಗಂಟೆಗೆ ಜಿಲ್ಲಾ ಎಸ್ಪಿ ಅಣ್ಣಾಮಲೈ ಪತ್ರಿಕೆಗಳಿಗೆ ಮಾಹಿತಿ ನೀಡಿದರು. ಘೋರ ದುರಂತದಲ್ಲಿ 8 ಶಾಲಾ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು.
ತುಂಬಾ ಬೇಸರವಾಯಿತು. ಆವಾಗ ಗೊತ್ತಾದದ್ದು. ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಕಾರು ಹಾಗೂ ಬಸ್ ನಡುವೆ ಅಪಘಾತ ಎಂದು. ತುಂಬಾ ಬೇಸರ ಅಂದರೆ ನಾನು ಕರೆದುಕೊಂಡು ಹೋದ ಮೂರೂ ಮಕ್ಕಳು ಉಳಿಯಲಿಲ್ಲ ಎಂಬುದು ಬೇಸರದ ಸಂಗತಿ. ಎಲ್ಲರಿಗೂ ಶ್ರದ್ದಾಂಜಲಿ.







