ಪುತ್ತೂರು: ಹೊಳೆಗೆ ಬಿದ್ದು ವೃದ್ಧ ಮೃತ್ಯು
ಪುತ್ತೂರು, ಜೂ.21: ಬೆಳ್ಳಿಯ ಆಭರಣ ತಯಾರಿಕಾ ವೃತ್ತಿಯ ವ್ಯಕ್ತಿಯೊಬ್ಬರ ಮೃತದೇಹ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಬೆದ್ರಾಳ ಎಂಬಲ್ಲಿನ ಹೊಳೆಯಲ್ಲಿ ಸೋಮವಾರ ಪತ್ತೆಯಾಗಿದ್ದು, ಅವರು ಹೊಳೆ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಕೆಮ್ಮಿಂಜೆ ಗ್ರಾಮದ ಬೆದ್ರಾಳ ನಿವಾಸಿ, ಬೆಳ್ಳಿಯ ನೇವಲ ಮತ್ತು ಕಾಲುಂಗುರ ಕಸೂತಿ ಕೆಲಸದಲ್ಲಿ ಪರಿಣತರಾಗಿದ್ದ ನಾರಾಯಣ ಆಚಾರ್ಯ (70) ಮೃತಪಟ್ಟ ವ್ಯಕ್ತಿ.
ತಮ್ಮ ಮನೆಯಲ್ಲಿಯೇ ಬೆಳ್ಳಿಯ ನೇವಲ ಮತ್ತು ಕಾಲುಂಗುರ ಕಸೂತಿ ಕೆಲಸ ಮಾಡಿ ಪುತ್ತೂರಿನ ವಿವಿಧ ಚಿನ್ನದ ಮತ್ತು ಬೆಳ್ಳಿಯ ಮಳಿಗೆಗಳಿಗೆ ನೀಡುತ್ತಿದ್ದ ನಾರಾಯಣ ಆಚಾರ್ಯ ಅವರು ಸೋಮವಾರ ಮಧ್ಯಾಹ್ನ ಬೆದ್ರಾಳ ಪೇಟೆಗೆಂದು ಮನೆಯಿಂದ ಹೊರಟು ಹೋಗಿದ್ದರು. ಅವರು ಸಂಜೆಯಾದರೂ ಮನೆಗೆ ಹಿಂದಿರುಗದ ಕಾರಣ ಮನೆಮಂದಿ ಆತಂಕಿತರಾಗಿ ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.
ಇದೇ ಸಂದರ್ಭದಲ್ಲಿ ದಾರಿಹೋಕರೊಬ್ಬರಿಗೆ ಬೆದ್ರಾಳ ಹೊಳೆಯಲ್ಲಿ ನಾರಾಯಣ ಆಚಾರ್ಯರ ಮೃತದೇಹ ನೀರಿನಲ್ಲಿ ತೇಲಾಡುತ್ತಿರುವುದು ಕಂಡು ಬಂದಿತ್ತು. ಬೆದ್ರಾಳ ಹೊಳೆಯ ಬದಿಯಲ್ಲಿರುವ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗಿದ್ದ ನಾರಾಯಣ ಆಚಾರ್ಯ ಅವರು ಹೊಳೆ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







