ಡಿವೈಎಫ್‌ಐ ಕಾರ್ಯಕರ್ತನಿಗೆ ಪೊಲೀಸರಿಂದ ಹಲ್ಲೆ: ಆಯುಕ್ತರಿಗೆ ದೂರು
ಕೊಣಾಜೆ, ಜೂ.21: ಅಂಬ್ಲಮೊಗರು ಗ್ರಾಮದ ಡಿವೈಎಫ್‌ಐ ಘಟಕದ ಅಧ್ಯಕ್ಷ ಇಬ್ರಾಹೀಂ ಮದಕ ಎಂಬವರ ಮನೆಗೆ ಸೋಮವಾರ ರಾತ್ರಿ ನುಗ್ಗಿದ ಪೊಲೀಸ್ ಪೇದೆಯೋರ್ವ ಇಬ್ರಾಹೀಂರ ಮಗನಿಗೆ ಹಲ್ಲೆಗೈದಿದ್ದು ತಡೆಯಲು ಬಂದ ಪತ್ನಿ ಮತ್ತು ತಾಯಿಯ ಮೇಲೂ ದೌರ್ಜನ್ಯವೆಸಗಿಸಗಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಲಾಗಿದೆ.
ಹಲ್ಲೆಗೊಳಗದವರನ್ನು ಇಬ್ರಾಹಿಂ ಮದಕ ಅವರ ಹಿರಿಯ ಪುತ್ರ ರಿಯಾಝ್(29) ಎಂದು ಗುರುತಿಸಲಾಗಿದ್ದು, ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮದಕದಲ್ಲಿ ರವಿವಾರ ರಾತ್ರಿ ಸ್ಥಳೀಯ ಯುವಕ ರೋಷನ್ ಎಂಬವರಿಗೆ ಗುಂಪೊಂದು ಸೇರಿ ಹಲ್ಲೆಗೈದಿತ್ತೆನ್ನಲಾಗಿದ್ದು ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸೋಮವಾರ ಮಧ್ಯರಾತ್ರಿ ಮದಕದಲ್ಲಿರುವ ಇಬ್ರಾಹೀಂರ ಮನೆಗೆ ಮಫ್ತಿಯಲ್ಲಿ ಬಂದ ಇಬ್ಬರು ಪೊಲೀಸ್ ಪೇದೆಗಳು ಮನೆಯ ಬಾಗಿಲು ಬಡಿದಿದ್ದು ಬಾಗಿಲು ತೆರೆದ ರಿಯಾಝ್ ಅವರಲ್ಲಿ ಇಬ್ರಾಹೀಂ ಎಲ್ಲಿ ಎಂದು ಕೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ ತಂದೆ ತಲಪಾಡಿಯಲ್ಲಿ ಆಯೋಜಿಸಿರುವ ಇಫ್ತಾರ್ ಕೂಟವೊಂದಕ್ಕೆ ತೆರಳಿರುವುದಾಗಿ ರಿಯಾಝ್ ತಿಳಿಸಿದ್ದು, ರೋಷನ್ ಹಲ್ಲೆ ಆರೋಪಿಗಳಾದ ಅಝೀಝ್ ಮತ್ತು ರಿಝ್ವೆನ್‌ರ ಮನೆ ತೋರಿಸುವಂತೆ ಹೇಳಿದ್ದಾರೆ. ಅದಕ್ಕೆ ರಿಯಾಝ್ ನಾನು ಕೂಲಿ ಕೆಲಸ ಮಾಡುವವ. ಬೆಳಗ್ಗೆ ತೆರಳಿದರೆ ರಾತ್ರಿ ಬರುವುದು. ಯಾರ ಬಗ್ಗೆಯೂ ತಿಳಿದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಇದರಿಂದ ಕುಪಿತಗೊಂಡ ಪೇದೆ ರಾಜೇಶ್ ಎಂಬವರು ರಿಯಾಝ್‌ರ ಕೆನ್ನೆಗೆ ಬಾರಿಸಿ ಹೊಟ್ಟೆಗೆ ತುಳಿದು, ಬಾಯಿ ಬಿಡಿಸಲು ನಮಗೆ ಗೊತ್ತೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊರಗೆ ಎಳೆದೊಯ್ಯುವಾಗ ತಡೆಯಲು ಬಂದ ಪತ್ನಿ ಮತ್ತು ತಾಯಿಯನ್ನೂ ದೂಡಿದ್ದು ನಂತರ ರಿಯಾಝ್‌ರನ್ನು ಬಿಟ್ಟು ತೆರಳಿದ್ದಾರೆ ಎನ್ನಲಾಗಿದೆ.
ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು
ಗಾಯಗೊಂಡ ಅಝೀಝ್ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ವಿನಾ ಕಾರಣ ಯಾವುದೇ ಪ್ರಕರಣಕ್ಕೂ ಸಂಬಂಧವಿಲ್ಲದ ಮಗ ಮತ್ತು ಮನೆಯವರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ಪೊಲೀಸ್ ಪೇದೆ ರಾಜೇಶ್ ವಿರುದ್ಧ ಕ್ರಮ ಜರಗಿಸುವಂತೆ ಇಬ್ರಾಹೀಂ ಮದಕ ಅವರು ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಡಿವೈಎಫ್‌ಐ ಮುಖಂಡರಾದ ಇಮ್ತಿಯಾಝ್ ಬಿ.ಕೆ, ಜೀವನ್ ರಾಜ್ ಮತ್ತಿತರರು ತಪ್ಪಿತಸ್ಥ ಪೊಲೀಸ್ ಪೇದೆ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಕೊಣಾಜೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.





.jpg.jpg)



