ಕೂರ್ಗ್ ಕಾಲ್ ಗರ್ಲ್ಸ್ ವೆಬ್‌ಸೈಟ್ ವಂಚನೆ : ಐವರ ಬಂಧನ

ಮಡಿಕೇರಿ, ಜೂ.21: ಕೂರ್ಗ್ ಕಾಲ್ ಗರ್ಲ್ಸ್ ಹೆಸರಿನ ವೆಬ್‌ಸೈಟ್ ಮೂಲಕ ಪ್ರವಾಸಿಗರನ್ನು ಹಾಗೂ ಸಾರ್ವಜನಿಕರನ್ನು ವಂಚಿಸುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಯುವತಿಯರ ಆಮಿಷ ತೋರಿಸಿ ದರೋಡೆ ಮಾಡುತ್ತಿದ್ದ ಐವರನ್ನು ಡಿಸಿಐಬಿ ಪೊಲೀಸರು ಕುಶಾಲನಗರದಲ್ಲಿ ಬಂಧಿಸಿದ್ದಾರೆ.
ಕುಶಾಲನಗರ ನಿವಾಸಿ ಎನ್. ವೇಣುಗೋಪಾಲ್(32), ಏಳನೆ ಹೊಸಕೋಟೆ ನಿವಾಸಿ ಸಿ.ಎಸ್. ಜಯಚಂದ್ರ(29), ಸಕಲೇಶಪುರ ನಿವಾಸಿ ಅಬ್ದುಲ್ ಕರೀಮ್(21), ಏಳನೆ ಹೊಸಕೋಟೆಯ ಎಸ್. ಶರತ್ ಕುಮಾರ್(27) ಹಾಗೂ ಗುಮ್ಮನಕೊಲ್ಲಿಯ ಎಂ. ಯು. ಮುಸ್ತಫಾ(35) ಬಂಧಿತ ಆರೋಪಿಗಳು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, ವಂಚನೆ ಪ್ರಕರಣ ಮತ್ತು ತನಿಖೆಯ ಕುರಿತು ಮಾಹಿತಿ ನೀಡಿದರು. ಮಾಧ್ಯಮಗಳಲ್ಲಿ ಪ್ರಕಟವಾದಂತೆ ಕಾಲ್‌ಗರ್ಲ್ ವೆಬ್‌ಸೈಟ್‌ನ್ನು ಬೆನ್ನು ಹತ್ತಿದ ಪೊಲೀಸರು, ಅದರಲ್ಲಿ ನಮೂದಿಸಲ್ಪಟ್ಟಿದ್ದ ಮೊಬೈಲ್ ಸಂಖ್ಯೆಗಳನ್ನು ಜಾಲಾಡಿದರು. ನಕಲಿ ಹೆಸರು ಮತ್ತು ವಿಳಾಸಗಳ ಮೂಲಕ ಸಿಮ್ ಖರೀದಿಯಾಗಿರುವುದು ಗಮನಕ್ಕೆ ಬಂತಲ್ಲದೆ, ಮಡಿಕೇರಿಯ ನಿವಾಸಿಯೊಬ್ಬರು ಈ ಮೋಸದ ಜಾಲಕ್ಕೆ ಸಿಲುಕಿರುವ ಮಾಹಿತಿ ತಿಳಿದು ಬಂತು. ಈ ವ್ಯಕ್ತಿಯಿಂದ 11,500 ರೂ. ಹಾಗೂ ಮೊಬೈಲ್ ಫೋನ್ ದರೋಡೆ ಮಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ವ್ಯಕ್ತಿಯ ಮನವೊಲಿಸಿ, ಸುಂಟಿಕೊಪ್ಪಠಾಣೆಯಲ್ಲಿ ದೂರು ದಾಖಲಾಗುವಂತೆ ನೋಡಿಕೊಂಡರು. ದೂರಿನನ್ವಯ ಡಿಸಿಐಬಿ ಪೊಲೀಸರು ತನಿಖೆಯನ್ನು ಕೈಗೊಂಡು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾದರೆಂದು ಹೇಳಿದರು.
ಹೆಣ್ಣಿಗಾಗಿ ಹೋಗಿ ಹಣ ಕಳೆದುಕೊಂಡರು:
ಸುಂಟಿಕೊಪ್ಪದಲ್ಲಿ ದೂರು ನೀಡಿದ ವ್ಯಕ್ತಿಯ ಪ್ರಕಾರ ಕಾಲ್‌ಗರ್ಲ್ ವೆಬ್‌ಸೈಟ್‌ನಲ್ಲಿದ್ದ ಮೊಬೈಲ್ ಸಂಖ್ಯೆಯೊಂದಕ್ಕೆ ಕರೆ ಮಾಡಿ ಯುವತಿ ಸಿಗುವ ಬಗ್ಗೆ ವಿಚಾರಿಸಿದ್ದಾರೆ. ಯುವತಿಯನ್ನು ತೋರಿಸುವುದಾಗಿ ಹೇಳಿದ ವಂಚಕರು ಸುಂಟಿಕೊಪ್ಪಕ್ಕೆ ಬರುವಂತೆ ತಿಳಿಸಿದ್ದಾರೆ. ಅಲ್ಲಿಗೆ ತೆರಳಿದ ಮಡಿಕೇರಿಯ ವ್ಯಕ್ತಿಯನ್ನು ಕರೆ ಮಾಡಿದಾತ ಸೇರಿದಂತೆ ಮೂವರು ಕುಶಾಲನಗರ ರಸ್ತೆಯಲ್ಲಿ ಕರೆದೊಯ್ಯುತ್ತಿದ್ದಾಗ ಗಾಬರಿಗೊಂಡ ಮಡಿಕೇರಿ ನಿವಾಸಿ ತಮಗೆ ಯುವತಿ ಬೇಡವೆಂದರು. ಈ ಸಂದರ್ಭ ಮೂವರು ಆರೋಪಿಗಳು ಬಲವಂತದಿಂದ ವ್ಯಕ್ತಿಯ ಬಳಿ ಇದ್ದ 11,500 ರೂ. ನಗದು ಹಾಗೂ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ಮಾಹಿತಿ ನೀಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ವೇಣುಗೋಪಾಲ್ ಎಂಬ ಒಬ್ಬ ಆರೋಪಿ ಮಾತ್ರ ಬಂಧಿತನಾಗಿದ್ದು, ಇನ್ನಿಬ್ಬರು ತಲೆ ಮರೆಸಿಕೊಂಡಿದ್ದಾರೆ. ಇವರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆಯೆಂದು ಎಸ್ಪಿ ತಿಳಿಸಿದರು. ಈ ತಂಡದ ಬಳಿ ಯಾವುದೇ ಯುವತಿಯರಿಲ್ಲ. ಕೇವಲ ದರೋಡೆ ಮಾಡುವ ಉದ್ದೇಶದಿಂದ ವೆಬ್‌ಸೈಟ್‌ನಲ್ಲಿ ಯುವತಿಯರ ಆಮಿಷ ತೋರಿಸಿ ಪ್ರವಾಸಿಗರನ್ನು ಹಾಗೂ ಸಾರ್ವಜನಿಕರನ್ನು ಲೂಟಿ ಮಾಡಲಾಗುತ್ತಿತ್ತು ಎಂದು ಹೇಳಿದರು.
ವೆಬ್‌ಸೈಟ್ ಜಾಲಕ್ಕೆ ಬಲಿಯಾಗಬೇಡಿ: ಯುವತಿಯರಿಗಾಗಿ ವೆಬ್‌ಸೈಟ್‌ನ ಮೊಬೈಲ್ ಸಂಖ್ಯೆಗಳಿಗೆ ಕರೆಮಾಡಿ ವಂಚನೆಗೆ ಒಳಗಾದವರು ಅಂಜಿಕೆಯಿಂದ ದೂರು ನೀಡಲು ಮುಂದೆ ಬರುತ್ತಿಲ್ಲ. ಸಾಕಷ್ಟು ಮಂದಿಗೆ ವಂಚನೆಯಾಗಿರುವ ಬಗ್ಗೆ ಶಂಕೆಯಿದ್ದು, ದೂರವಾಣಿ ಕಾಲ್‌ಲೀಸ್ಟ್‌ಗಳ ಮೂಲಕ ಮಾಹಿತಿ ಕಲೆ ಹಾಕಿ ತನಿಖೆ ನಡೆಸುವುದಾಗಿ ಎಸ್ಪಿ ತಿಳಿಸಿದರು.
ಪ್ರವಾಸಿಗರು ಹಾಗೂ ಸಾರ್ವಜನಿಕರು ಇನ್ನಾದರು ಎಚ್ಚೆತ್ತುಕೊಂಡು ಇಂತಹ ವೆಬ್‌ಸೈಟ್‌ಗಳ ಜಾಲಕ್ಕೆ ಬಲಿಯಾಗಬಾರೆಂದು ಅವರು ಮನವಿ ಮಾಡಿದರು.
ಮುಂದಿನ ಟಾರ್ಗೆಟ್ ಅನಧಿಕೃತ ಹೋಮ್‌ಸ್ಟೇಗಳು:
ಅನಧಿಕೃತ ಹೋಮ್‌ಸ್ಟೇಗಳ ಬಗ್ಗೆ ಮಾತನಾಡಿದ ಎಸ್ಪಿ, ಪೊಲೀಸ್ ಇಲಾಖೆಯ ಮುಂದಿನ ಟಾರ್ಗೆಟ್ ಅಕ್ರಮ ಹೋಮ್‌ಸ್ಟೇಗಳೆಂದು ಸ್ಪಷ್ಟಪಡಿಸಿದರು. ಅನಧಿಕೃತವಾಗಿ ನಡೆಯುತ್ತಿರುವ ಹೋಮ್ ಸ್ಟೇಗಳಿಗೆ ದಾಳಿ ಮಾಡಿ ಮುಚ್ಚುವುದಾಗಿ ತಿಳಿಸಿದರು. ವೇಶ್ಯಾವಾಟಿಕೆ ಪ್ರಕರಣಗಳ ಬಗ್ಗೆ ಪೊಲೀಸರು ನಿಗಾ ವಹಿಸಿದ್ದಾರೆ ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ಸ್ಪಷ್ಟಪಡಿಸಿದರು.
ಡಿಸಿಐಬಿ ವೃತ್ತ ನಿರೀಕ್ಷಕ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ಸಿಬ್ಬಂದಿಯರಾದ ಎನ್.ಟಿ. ತಮ್ಮಯ್ಯ, ಬಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್ ಕುಮಾರ್, ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಆರ್. ವಸಂತ, ಕೆ.ಎಸ್. ಶಶಿ ಕುಮಾರ್, ಜೋಸ್ ನಿಶಾಂತ್, ಸುನೀಲ್, ಸಿ.ಕೆ. ರಾಜೇಶ್, ಎಂ.ಜಿ. ಗಿರೀಶ್, ಸುಂಟಿಕೊಪ್ಪಠಾಣಾ ಎಸ್ಸೈ ಅನೂಪ್ ಮಾದಪ್ಪ, ಎಎಸ್ಸೈ ಪಾರ್ಥ, ಸಿಬ್ಬಂದಿಗಳಾದ ದಯಾನಂದ , ದಿನೇಶ್ ಪುಂಡರೀಕಾಕ್ಷ, ಪ್ರಕಾಶ್, ಗೋಪಾಲ್ ಹಾಗೂ ಕಾರ್ಯಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







