ಜಿಲ್ಲಾಡಳಿತ, ಆಯುಷ್ ಇಲಾಖೆಯಿಂದ ಯೋಗ ದಿನಾಚರಣೆ

ಮಂಗಳೂರು, ಜೂ. 21: ದ.ಕ. ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆಯ ವತಿಯಿಂದ ಅಂತಾರಾಷ್ಟ್ರೀಯ ದಿನಾಚರಣೆಯನ್ನು ಮಂಗಳಾ ಒಳಾಂಗಣ ಕ್ರೀಡಾಂಗಣ ಮತ್ತು ಮಿನಿ ವಿಧಾನಸೌಧದಲ್ಲಿ ನಡೆಯಿತು.
ನಗರದ ಮಂಗಳಾ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಸಾರಥ್ಯದಲ್ಲಿ ಯೋಗ ಪ್ರದರ್ಶನ ನಡೆಯಿತು.
ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷ ಕಸ್ತೂರಿ ಪಂಜ, ತಾಲೂಕು ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಐ.ಶ್ರೀ ವಿದ್ಯಾ, ಪೊಲೀಸ್ ಅಧೀಕ್ಷಕ ಭೂಷಣ್ ಗುಲಾಬ್ರಾವೋ ಬೊರಾಸೆ, ಅಪರ ಜಿಲ್ಲಾಧಿಕಾರಿ ಶ್ರೀ ಕುಮಾರ್, ಡಿಸಿಪಿ ಶಾಂತರಾಜ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯೋಗಾಸನದಲ್ಲಿ ಪಾಲ್ಗೊಂಡಿದ್ದರು.
ಆಯಷ್ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್, ವೈದ್ಯಾಧಿಕಾರಿಗಳಾದ ಡಾ.ಮುರಳೀಧರ್, ಡಾ.ವಿಶ್ವನಾಥ್, ಡಾ.ಸಹನಾ ವಿವೇಕ್, ಡಾ.ಮುಹಮ್ಮದ್ ಅಶ್ಫಾಕ್ ಹುಸೇನ್, ಯುವಜನ ಸೇವಾ ಇಲಾಖೆಯ ಲಿಲ್ಲಿ ಪಾಸ್, ನಿಸರ್ಗ ಸಂಸ್ಥೆಯ ಮಂಜುನಾಥ್ ಉಪಸ್ಥಿತರಿದ್ದರು.
ಮೂಡಬಿದ್ರೆ ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ದೇಲಂಪಾಡಿ ಯೋಗ ಕೇಂದ್ರದ ತಂಡದವರು ಸಹಕಾರ ನೀಡಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ದೇವದಾಸ್ ಸ್ವಾಗತಿಸಿದರು.
ಮಿನಿವಿಧಾನಸೌಧದಲ್ಲಿ ಯೋಗ ದಿನಾಚರಣೆ
ದ.ಕ. ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ ಆಶ್ರಯದಲ್ಲಿ ತಾ.ಪಂ. ಆವರಣದ ಮಿನಿವಿಧಾನ ಸೌಧದಲ್ಲಿ ಯೋಗ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ 7:30ಕ್ಕೆ ತಹಶೀಲ್ದಾರ್ ಪುಷ್ಪರಾಜ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯೋಗ ತಜ್ಞ ಕುಶಾಲಪ್ಪ ಗೌಡ ನೇತೃತ್ವದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. ಸಾರ್ವಜನಿಕರು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಹಾಗೂ ತಾ.ಪಂ. ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲೆಯ ಆಯುಷ್ ವೈದಾಧಿಕಾರಿಗಳಾದ ಡಾ.ಶಾಮರಾವ್, ಡಾ.ಶೋಭಾ ರಾಣಿ, ಡಾ.ಸಹನಾ ಕೆ., ಡಾ.ರಮೇಶ್‌ಚಂದ್ರ ಮತ್ತು ಸಿಬ್ಬಂದಿಗಳಾದ ದಾಮೋದರ, ಪವಿತ್ರಾ ಮೊದಲಾದವರು ಹಾಜರಿದ್ದರು.







