ಮೂಡುಬಿದಿರೆ: ಚರಂಡಿ, ಪಾರ್ಕಿಂಗ್ ಅವ್ಯವಸ್ಥೆ ವಿರುದ್ಧ ಪುರಸಭಾ ಸದಸ್ಯರಿಂದ ತರಾಟೆ
ಮೂಡುಬಿದರೆ ಪುರಸಭೆಯ ಮಾಸಿಕ ಸಭೆ
.jpg)
ಮೂಡುಬಿದಿರೆ, ಜೂ.21: ಮಳೆಗಾಲ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ, ಚರಂಡಿಯನ್ನು ದುರಸ್ತಿಗೊಳಿಸಲು ಅಧಿಕಾರಿಗಳು ಮುಂದಾಗಿಲ್ಲ. ಇದರಿಂದ ರಸ್ತೆಯಲ್ಲಿ ಮಳೆ ನೀರು ನಿಂತು ಸಾರ್ವಜನಿಕರಿಗೆ ನಡೆದಾಡಲು ಕಷ್ಟವಾಗಿದೆ. ಮಳೆ ಬರುವ ಮೊದಲು, ಕನಿಷ್ಠ ಪಕ್ಷ ಮಾರ್ಚ್ ತಿಂಗಳಲ್ಲಾದರೂ ಕಾಮಗಾರಿಯನ್ನು ಪ್ರಾರಂಭಿಸಬಹುದಾಗಿತ್ತು ಎಂದು ಪುರಸಭಾ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ.
ಪುರಸಭಾಧ್ಯಕ್ಷೆ ರೂಪಾ ಎಸ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಭವನದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಸದಸ್ಯರಾದ ಪ್ರಸಾದ್ ಕುಮಾರ್, ಹನೀಫ್, ರಮಣಿ, ಲಕ್ಷಣ್ ಪೂಜಾರಿ ಸಹಿತ ವಿವಿಧ ಸದಸ್ಯರು ಮಾತನಾಡಿ ಮಳೆಗಾಲ ಪ್ರಾರಂಭವಾದರೂ ಚರಂಡಿ ಹೂಳೆತ್ತುವುದು ಸಹಿತ, ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಂಡಿಲ್ಲ, ಚರಂಡಿ ಸಹಿತ ವಿವಿಧ ಅಭಿವೃದ್ಧಿ ಕಾರ್ಯ ವಿಳಂಬಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಚರಂಡಿ ದುರಸ್ತಿಗೆ ಹೊಸ ಟೆಂಡರ್ ಕರೆಯಲಾಗಿದ್ದು ಜಿಲ್ಲಾಧಿಕಾರಿ ಅನುಮತಿ ಇನ್ನಷ್ಟೆ ಸಿಗಬೇಕೆಂದು ಪರಿಸರ ಇಂಜಿನಿಯರ್ ಶಿಲ್ಪಾ ತಿಳಿಸಿದರು. ಹೊಸ ಟೆಂಡರ್ ಕಾರ್ಯಾನುಷ್ಠಾನಕ್ಕೆ ಬರುವಾಗ ಮಳೆಗಾಲ ಮುಗಿಯುತ್ತದೆ. ಘನತ್ಯಾಜ್ಯ ನಿರ್ವಹಣೆಯ ಗುತ್ತಿಗೆದಾರರಿಗೆ ಚರಂಡಿ ದುರಸ್ತಿ ಜವಾಬ್ದಾರಿ ವಹಿಸಿಕೊಡಿ ಎಂದು ಸದಸ್ಯರು ಆಗ್ರಹಿಸಿದರು. ಹಳೆಯ ಟೆಂಡರ್ ಷರತ್ತಿನಲ್ಲಿ ಚರಂಡಿ ರಿಪೇರಿಯ ಪ್ರಸ್ತಾಪವಿಲ್ಲದಿರುವುದರಿಂದ ಅದರ ಕಾರ್ಮಿಕರನ್ನು ಚರಂಡಿ ದುರಸ್ತಿಗೆ ಉಪಯೋಗಿಸುವಂತಿಲ್ಲ ಎಂದು ಇಂಜಿನಿಯರ್ ಹೇಳಿದರು.
ಚರಂಡಿ ದುರಸ್ತಿ ವಿಚಾರ ಉಲ್ಲೇಖವಾದ್ದರಿಂದ ಅದರಂತೆ ಕೆಲಸ ಮಾಡಿಸುವುದಾಗಿ ಮುಖ್ಯಾಧಿಕಾರಿ ಶೀನ ನಾಯ್ಕಾ ಸಭೆಗೆ ತಿಳಿಸಿದರು. ಮೂಡುಬಿದಿರೆ ಪುರಸಭೆಯು ಮೀನು ಮಾರುಕಟ್ಟೆಗೆ 4 ಲಕ್ಷ ರೂ. ವೆಚ್ಚದಲ್ಲಿ ಪುರಸಭೆಯ ವತಿಯಿಂದ ಶೀಟ್ ಅಳವಡಿಸುವ ಪ್ರಸ್ತಾವನೆಯನ್ನು ಶೀನ ನ್‌ಕಾ ಸಭೆಯ ಗಮನಕ್ಕೆ ತಂದರು.
ಹೊಸ ಮಾರುಕಟ್ಟೆ ನಿರ್ಮಿಸುವ ಯೋಜನೆ ಇರುವಾಗ, ಹಣವನ್ನು ಯಾಕೆ ಪೋಲು ಮಾಡುತ್ತೀರಿ? ಒಂದು ವೇಳೆ ಶೀಟ್ ಅಳವಡಿಸುವುದಿದ್ದರೆ ತರಕಾರಿ ವ್ಯಾಪಾರಿಗಳಿಗೂ ವ್ಯವಸ್ಥೆ ಮಾಡಿಕೊಡಿ. ತಾರತಮ್ಯ ಬೇಡ ಎಂದು ಸದಸ್ಯರಾದ ಮನೋಜ್, ಉಮೇಶ್ ದೇವಾಡಿಗ ತಿಳಿಸಿದರು. ಹೊಸ ಮಾರುಕಟ್ಟೆ ಯೋಜನೆ ಸರಕಾರದ ಮಟ್ಟದಲ್ಲಿದೆ. ಮಾರುಕಟ್ಟೆ ನಿರ್ಮಾಣದ ಸಂದರ್ಭ ಶೀಟ್‌ಗಳನ್ನು ಸ್ಥಳಾಂತರಿಸಬಹುದು ಎಂದು ಶೀನ ಸಮಜಾಯಿಷಿ ನೀಡಿದರು.
ಪಾರ್ಕಿಂಗ್ ಅವ್ಯವಸ್ಥೆ
ಪಾರ್ಕಿಂಗ್ ಸುವ್ಯವಸ್ಥೆಗೊಳಿಸಲು 71 ಸಾವಿರ ರೂಪಾಯಿಗಳನ್ನು ವ್ಯಯ ಮಾಡಿ ಸೂಚನಾ ಫಲಕ ಸಹಿತ ವಿವಿಧ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ. ಆದರೂ ಪಾರ್ಕಿಂಗ್ ಅವ್ಯವಸ್ಥೆಯನ್ನು ಸರಿದೂಗಿಸಲು ಸಾಧ್ಯವಾಗಿಲ್ಲ ಎಂದು ಪಿ.ಕೆ ಥೋಮಸ್ ಪ್ರಸ್ತಾಪಿಸಿದರು.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯ ಕೊರತೆಯಿದೆ. 10 ಮಂದಿ ಪೊಲೀಸರು ತರಬೇತಿಗೆ ತೆರಳಿದ್ದಾರೆ. ಅವರು ಬಂದ ತಕ್ಷಣ ಕೆಲವು ಪೊಲೀಸರು ಪಾರ್ಕಿಂಗ್ ಸುವ್ಯವಸ್ಥೆಗೆ ನಿಯೋಜಿಸಲಾಗುವುದು ಎಂದು ಮೂಡುಬಿದಿರೆ ಪೊಲೀಸ್ ಠಾಣಾಧಿಕಾರಿ ದೇಜಪ್ಪ ಹೇಳಿದರು.
ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣ ಎದುರು ನಿಲ್ಲುವ ಮುಂಬೈ ಬಸ್‌ಗಳಿಂದಾಗಿ ಸಂಚಾರ ಹಾಗೂ ಇತರ ವಾಹನಗಳ ಪಾರ್ಕಿಂಗ್ ಮಾಡಲು ಕಷ್ಟವಾಗಿದೆ. ಬಸ್‌ಗಳು ಸ್ವರಾಜ್ಯ ಮೈದಾನದಲ್ಲಿ ನಿಲ್ಲುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು. ಮುಖ್ಯ ರಸ್ತೆಯಲ್ಲಿ ಘನವಾಹನಗಳಿಗೆ ಸಂಚಾರಿಸುವ ಬದಲು ರಿಂಗ್‌ರೋಡ್ ಮುಖಾಂತರವೇ ಸಾಗಲು ಕೂಡ ಕ್ರಮ ಕೈಗೊಳ್ಳಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಲಕ್ಷ್ಮಣ್ ಪೂಜಾರಿ ಆಗ್ರಹಿಸಿದರು. ನಿಯಮಗಳನ್ನು ಆಗಾಗ ಬದಲಾಯಿಸುವುದರಿಂದ ಪ್ರಯಾಣಿಕರು, ಟ್ರಾವೆಲ್ಸ್ ಏಜೆನ್ಸಿಯವರು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಸದಸ್ಯ ರತ್ನಾಕರ ದೇವಾಡಿಗ ಆಕ್ಷೇಪ ವ್ಯಕ್ತಪಡಿಸಿದರು.
ನಗರದ ಪಾರ್ಕಿಂಗ್ ಸಮಸ್ಯೆಗಳನ್ನು ಹಾಗೂ ಪರಿಹಾರದ ಸಾಧಕ, ಬಾಧಕಗಳನ್ನು ಚರ್ಚಿಸಿ, ಡಿಸಿಗೆ ವರದಿ ಸಲ್ಲಿಸಿ. ಅವರು ನಮಗೆ ಆದೇಶ ನೀಡಿದರೆ, ಅದನ್ನು ನಾವು ಅನುಷ್ಠಾನಗೊಳಿಸುತ್ತೇವೆ ಎಂದು ಎಸೈ ದೇಜಪ್ಪ ಸಲಹೆ ನೀಡಿದರು.
ಏಕಮುಖ ರಸ್ತೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಸದಸ್ಯರು ಒತ್ತಾಯಿಸಿದರು. ಪುರಸಭೆ ಕಾರ್ಯಾಲಯದ ಫ್ಯಾನ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಪ್ರಸಾದ್ ಕುಮಾರ್ ಆರೋಪಿಸಿದರು. ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಾಧಿಕಾರಿ ಉತ್ತರಿಸಿದರು. ಪುರಸಭಾ ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸದಸ್ಯರಾದ ಪ್ರೇಮಾ ಸಾಲ್ಯಾನ್, ಅಲ್ವಿನ್ ಮೆನೇಜಸ್, ನಾಗರಾಜ ಪೂಜಾರಿ ಸಹಿತ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು.







