ರಾಜನ್‌ರಷ್ಟು ಸಮರ್ಥ ವ್ಯಕ್ತಿ ಮುಂದೆ ದೊರಕಿಯಾರೇ?

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಹುದ್ದೆ ತೊರೆಯಲು ರಘುರಾಮ್ ರಾಜನ್ ಏಕೆ ಮುಂದಾದರು ಎನ್ನುವುದಕ್ಕೆ ನಿಜ ಕಾರಣ ನಿಗೂಢ. ಬೋಧನಾ ವೃತ್ತಿಗೆ ಮರಳುವ ಇಂಗಿತ ವ್ಯಕ್ತಪಡಿಸಿರುವುದಷ್ಟೇ ಅವರು ದೇಶದ ಜನತೆಗೆ ನೀಡಿದ ಕಾರಣ. ಸೆಪ್ಟ್ಟಂಬರ್ 4ಕ್ಕೆ ಅವರ ಅಧಿಕಾರಾ ವಧಿ ಮುಗಿಯಲಿದ್ದು, 81 ದಿನಗಳ ಮೊದಲೇ ತಮ್ಮ ನಿರ್ಧಾರವನ್ನು ರಾಜನ್ ಪ್ರಕಟಿಸಿದ್ದಾರೆ. ಆದರೆ ಹುದ್ದೆಯಲ್ಲಿ ಮುಂದುವರಿಯುವ ಬಗ್ಗೆಯೂ ಮುಕ್ತ ಮನಸ್ಸು ಹೊಂದಿರುವ ಅರ್ಥದ ಮಾತನ್ನೂ ಆಡಿದ್ದಾರೆ. ಆದರೆ ಇವೆಲ್ಲವೂ ಸಾಮಾಜಿಕ ತಾಣಗಳಿಂದ ತಿಳಿದುಬಂದಿರುವ ಅಂಶಗಳು. ಇದರಿಂದ ವೇದ್ಯವಾಗುವ ಸ್ಪಷ್ಟ ಅಂಶವೆಂದರೆ, ಸರಕಾರ ಎಂದೂ ರಾಜನ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ.
ಮೊದಲನೆಯದಾಗಿ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ರಾಜನ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಸ್ವಾಮಿ 2016ರ ಎಪ್ರಿಲ್‌ನಲ್ಲಿ ರಾಜ್ಯಸಭೆ ಪ್ರವೇಶಿಸಿದ್ದರು. ಇದೇ ಸಂದರ್ಭದಲ್ಲಿ ರಾಜನ್ ಹೊರಹೋಗಲೂ ವೇದಿಕೆ ಸಿದ್ಧವಾಗಿದೆ. ಇದು ಕಾಕತಾಳೀಯವೇ?
ಎರಡನೆಯದಾಗಿ ಮೋದಿ ಸಂಪುಟದ ಸಚಿವರು ರಾಜನ್ ವಿರುದ್ಧ ಮಾಡಿರುವ ವಾಗ್ದಾಳಿಗಳು. ಉದಾಹರಣೆಗೆ, ‘ಕುರುಡರ ನಾಡಿನಲ್ಲಿ ಒಕ್ಕಣ್ಣನೇ ರಾಜ’ ಎಂದು ರಾಜನ್ ಹೇಳಿಕೆ ನೀಡಿದಾಗ, ವಾಣಿಜ್ಯ ಹಾಗೂ ಕೈಗಾರಿಕಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್, ರಾಜನ್ ಅವರ ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆರ್ಥಿಕ ಹಿಂಜರಿತದ ಅವಧಿಯಲ್ಲಿ ಕೂಡಾ ಭಾರತದ ಪ್ರಗತಿ ಸ್ಥಿರವಾಗಿದೆ ಎನ್ನುವುದನ್ನು ಹೇಳಲು ಈ ನಿದರ್ಶನವನ್ನು ರಾಜನ್ ಬಳಸಿದ್ದರು. 2016ರ ಎಪ್ರಿಲ್‌ನಲ್ಲಿ ಕಲ್ಲಿದ್ದಲು ಮತ್ತು ವಿದ್ಯುತ್ ಖಾತೆ ಸಚಿವ ಪಿಯೂಷ್ ಗೋಯಲ್ ಅವರು, ರಾಜನ್ ಕೇವಲ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡುತ್ತಿದ್ದು, ಬಡ್ಡಿದರ ಹೆಚ್ಚಿಸುವ ಮೂಲಕ ಪರಿಸ್ಥಿತಿ ಹದಗೆಡಿಸುತ್ತಿದ್ದಾರೆ ಎಂದು ದೂರಿದ್ದರು.
ಮೂರನೆಯದಾಗಿ 1992ರ ಬಳಿಕ ಸುಬ್ಬರಾವ್, ರೆಡ್ಡಿ, ಜಲನ್ ಹಾಗೂ ರಂಗರಾಜನ್ ಹೀಗೆ ಎಲ್ಲರ ಅಧಿಕಾರಾವಧಿಯನ್ನೂ ವಿಸ್ತರಿಸಲಾಗಿದೆ.
ಮುಕ್ತ ಮಾತು
ಬಹುಶಃ ರಾಜನ್ ಅವರಿಗೆ ತಮ್ಮ ಅವಧಿ ಬಂದಿದೆ ಎನ್ನುವುದು ತಿಳಿದಿತ್ತು. ಇತ್ತೀಚಿನ ದಿನಗಳಲ್ಲಿ ಅವರು ಮಾಡಿದ ಹಲವು ಭಾಷಣಗಳಲ್ಲಿ, ತಮ್ಮ ಹಿಂದಿನ ಗವರ್ನರ್‌ಗಳಿಗಿಂತ ಭಿನ್ನವಾಗಿ, ಮುಕ್ತವಾಗಿ ಹಾಗೂ ಖಡಾಖಂಡಿತವಾಗಿ ಅನಿಸಿದ್ದನ್ನು ಹೇಳುತ್ತಿದ್ದರು. ಇದರಿಂದ ತಾವು ಕಳೆದುಕೊಳ್ಳುವುದು ಏನೂ ಇಲ್ಲ ಎನ್ನುವುದು ಅವರಿಗೆ ಮನವರಿಕೆಯಾದಂತಿತ್ತು. ಹೇಗೆ ಭ್ರಷ್ಟ ರಾಜಕಾರಣಿಗಳು ಅಸ್ತಿತ್ವ ಉಳಿಸಿಕೊಳ್ಳುತ್ತಾರೆ ಎನ್ನುವಲ್ಲಿಂದ ಹಿಟ್ಲರ್‌ಗೂ ಪ್ರಚೋದನೆ ನೀಡುವಂಥದ್ದು ಎನ್ನುವವರೆಗೂ ಕಂಡದ್ದನ್ನು ಕಂಡಂತೆ ಹೇಳುತ್ತಿದ್ದರು. ಪ್ರಬಲ ಸರಕಾರ ಸರಿಯಾದ ಮಾರ್ಗದಲ್ಲಿ ಮುನ್ನಡೆಯಲಾರದು ಎನ್ನುವಲ್ಲಿಂದ ಹಿಡಿದು ಅಸಹಿಷ್ಣುತೆ ವಿರುದ್ಧ ಧ್ವನಿ ಎತ್ತುವವರೆಗೆ, ಹಣದುಬ್ಬರ ಹಾಗೂ ಬಡ್ಡಿದರವನ್ನು ದೋಸಾಮೇನ್ಸಿಕ್ ಎಂದು ವಿವರಿಸುವವರೆಗೂ ರಾಜನ್ ಮುಕ್ತವಾಗಿ ಮಾತನಾಡುತ್ತಿದ್ದರು.
ಯಾವ ಆರ್‌ಬಿಐ ಗವರ್ನರ್, ತೀರಾ ಸಪ್ಪೆಎನಿಸುವ ದಲಾಲ್ ಸ್ಟ್ರೀಟ್ ಮತ್ತು ಮಿಂಟ್ ರೋಡ್ ಬಗೆಯ ಶ್ರೋತೃಗಳನ್ನು ಮೀರಿ ವಿಸ್ತೃತವಾದ ಶ್ರೋತೃವರ್ಗವನ್ನು ತಲುಪಿದ್ದರು? ಅಥವಾ ಮ್ಯಾರಥಾನ್ ಓಡಿದ್ದರು? ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ.
ರಘುರಾಮ್ ರಾಜನ್ ಹುಟ್ಟಿದ್ದು, 1963ರಲ್ಲಿ. ಅವರ ತಂದೆ ತಾಯಿ ಹುಟ್ಟಿದ್ದು, 1932 ಹಾಗೂ 1949ರಲ್ಲಿ. ರಂಗರಾಜನ್ ಆರ್‌ಬಿಐ ಗವರ್ನರ್ ಹುದ್ದೆಗೆ ಏರಿದಾಗ ಅವರಿಗೆ ಕ್ರಮವಾಗಿ 56 ಹಾಗೂ 62 ವರ್ಷ ವಯಸ್ಸು. ರಾಜನ್‌ಗೆ ಇಂದು 53 ವರ್ಷ ವಯಸ್ಸು. ಇದು ಏಕೆ ಮಹತ್ವದ್ದು? ಏಕೆಂದರೆ ರಾಜನ್ ಅವರು ಇನ್ನೂ ಯುವ ನೇತಾರ. ಯುವಸಂಪತ್ತೇ ಈ ದೇಶದ ಪ್ರಬಲ ಶಕ್ತಿ ಎನ್ನುವ ಹಿನ್ನೆಲೆಯಲ್ಲಿ ಇದಕ್ಕೆ ವಿಶೇಷ ಮಹತ್ವ ಇದೆ.
ಹಿಂದಿನ ಆರ್‌ಬಿಐ ಗವರ್ನರ್‌ಗಳಿಗಿಂತ ಭಿನ್ನವಾಗಿ ರಾಜನ್, ತಮ್ಮ ಭಾಷಣ- ಉಪನ್ಯಾಸಗಳ ಮೂಲಕ, ಪ್ರಾಮಾಣಿಕವಾಗಿ ದೊಡ್ಡ ಶ್ರೋತೃವರ್ಗವನ್ನು ತಲುಪಿದ್ದಾರೆ. ನಮ್ಮ ನೈತಿಕತೆಯ ಪ್ರತಿಪಾದಕರು ಹಾಗೂ ಸಂರಕ್ಷಕರು ದೇಶದ ಜನರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ ಸಂದರ್ಭದಲ್ಲಿ ನಮಗೆ ಇಂಥ ಯುವ- ಉತ್ಸಾಹಿ ಹಾಗೂ ಖಡಕ್ ಮಾತನಾಡುವ ನಾಯಕರ ಅಗತ್ಯವಿದೆ.
ಮಾತುಗಾರಿಕೆ ಮೀರಿ..
ಇಂಥ ಭಾವನಾತ್ಮಕ ಅಂಶಗಳ ಬಗ್ಗೆ ಮಾತನಾಡಿದ್ದು ಸಾಕು. ಇದೀಗ ಅವರ ಪ್ರತಿಭೆ ಬಗ್ಗೆ ಒಂದಷ್ಟು ಚರ್ಚಿಸೋಣ. ರಾಜನ್ ಆರ್‌ಬಿಐ ಮುಖ್ಯಸ್ಥರಾಗಿ ಸಾಧಿಸಿದ್ದೇನು? ಮೊದಲನೆಯದಾಗಿ ಅವರು 2013ರ ಸೆಪ್ಟೆಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದಾಗ, ಮಾರುಕಟ್ಟೆ ಸ್ಥಿತಿ ಅಲ್ಲೋಲ ಕಲ್ಲೋಲವಾಗಿತ್ತು. ಅವರು ಅಧಿಕಾರ ಸ್ವೀಕರಿಸುವ ಸ್ವಲ್ಪಮುನ್ನ ಅಂದರೆ ಜುಲೈ 23ರಿಂದ ಆಗಸ್ಟ್ 28ರ ಅವಧಿಯಲ್ಲಿ ನಿಫ್ಟಿ ಶೇ.13ರಷ್ಟು, ಭಾರತೀಯ ರೂಪಾಯಿ ಶೇ. 15ರಷ್ಟು ಕುಸಿದಿತ್ತು. ಆರ್‌ಬಿಐ ಗವರ್ನರ್ ಆಗಿ ರಾಜನ್ ಅಧಿಕಾರ ವಹಿಸಿಕೊಂಡ ದಿನ ನಿಫ್ಟಿ ಶೇ. 3ರಷ್ಟು ಪ್ರಗತಿ ಕಂಡಿತು. ಖಂಡಿತವಾಗಿಯೂ ಮಾರುಕಟ್ಟೆಯ ಏರಿಳಿತಗಳು ಸಹಜವಾಗಿಯೇ ನಿರ್ದಿಷ್ಟ ಸಂದೇಶಗಳನ್ನು ರವಾನಿಸುತ್ತವೆ. ಇದು ಖಂಡಿತ ವಾಗಿಯೂ ಪ್ರಬಲ ಸಂದೇಶವಾಗಿತ್ತು. ಅದೆಂದರೆ ಅಂತಿಮವಾಗಿ ಒಬ್ಬ ವಿಶ್ವಾಸಾರ್ಹ, ತಾಂತ್ರಿಕತೆಗಳನ್ನು ಅರಿತ ಸಮರ್ಥ ವ್ಯಕ್ತಿ ಆರ್‌ಬಿಐ ಗವರ್ನರ್ ಹುದ್ದೆ ಅಲಂಕರಿಸಿದ್ದಾರೆ ಎನ್ನುವ ಸಂದೇಶ ಅದು. ಅಂದರೆ ರಾಜನ್ ಜಾಗತಿಕ ಆರ್ಥಿಕ ಸಂಘರ್ಷವನ್ನು 2005ರಲ್ಲೇ ಅಂದಾಜು ಮಾಡಿದ್ದ ಮೇಧಾವಿ.
ಅಧಿಕಾರ ಸ್ವೀಕರಿಸಿದ ತಕ್ಷಣ ಅವರು, ವಿದೇಶಿ ಕರೆನ್ಸಿ, ಅನಿವಾಸಿ ಬ್ಯಾಂಕ್ ಠೇವಣಿಗಳನ್ನು ಬ್ಯಾಂಕ್‌ಗಳು ಆಕರ್ಷಿಸಲು ನೆರವಾಗುವಂತೆ ವಿಶೇಷ ರಿಯಾಯಿತಿ ಗವಾಕ್ಷಿಯನ್ನು ತೆರೆದರು. ಇದರ ಪರಿಣಾಮವಾಗಿ, ಭಾರತಕ್ಕೆ ಎಫ್‌ಎಎನ್‌ಆರ್ ಬಾಂಡ್‌ಗಳು ಹರಿದವು. ಇದು ಚಾಲ್ತಿ ಖಾತೆಯಲ್ಲಿದ್ದ ಕೊರತೆ ಸಮಸ್ಯೆಯನ್ನು ಬಗೆಹರಿಸಲು ಪೂರಕವಾಯಿತು. ಮೂರು ವರ್ಷಗಳ ಬಳಿಕ ಅಂದರೆ; 2016ರಲ್ಲಿ ಈ ಬಾಂಡ್‌ಗಳ ಅವಧಿ ಮುಗಿಯುತ್ತದೆ. ಈ ಬಾಂಡ್‌ಗಳ ಹೊರಹರಿವನ್ನು ತಡೆಯಲು ಅಗತ್ಯ ಸಿದ್ಧತೆಗಳನ್ನು ಆರ್‌ಬಿಐ ಮಾಡಿಕೊಳ್ಳಬೇಕಿದೆ.
ಕಳೆದ ಮೂರು ವರ್ಷಗಳಲ್ಲಿ, ಆರ್‌ಬಿಐ ನಿರ್ದಿಷ್ಟವಾಗಿ, ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರವನ್ನು ಗುರಿ ಮಾಡಿಕೊಂಡಿದೆ. ಅಂದರೆ ರಾಜನ್ ಅಧಿಕಾರಕ್ಕೆ ಬಂದ ಮೊದಲ ವರ್ಷ, ರಾಜನ್ ರೆಪೊ ದರವನ್ನು 75 ಮೂಲ ಅಂಕಗಳಷ್ಟು ಹೆಚ್ಚಿಸಿದರು. ಆರ್ಥಿಕ ಚಕ್ರ ಸುಧಾರಿಸಿದ ಬಳಿಕ ರೆಪೊ ದರವನ್ನು ಇಳಿಸಿದರು. 2015ರ ಜನವರಿಯಿಂದೀಚೆಗೆ 150 ಮೂಲ ಅಂಶಗಳಷ್ಟು ರೆಪೊ ದರ ಇಳಿಕೆಯಾಗಿದೆ. ಬಹುಶಃ ಈ ಹಂತದಲ್ಲಿ ಅವರು ವಿರೋಧಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಏಕೆಂದರೆ, ಬಡ್ಡಿದರವನ್ನು ಇನ್ನಷ್ಟು ಕಡಿಮೆ ಮಾಡುವಂತೆ ಆಗ್ರಹಿಸುವ ಪ್ರಬಲವಾದ ಧ್ವನಿ ಕೇಳಿಬಂದಿತ್ತು.
ಕಾರ್ಪೊರೇಟ್ ಜಗತ್ತು ತನ್ನ ಗ್ರಾಹಕರಿಗೆ ಕಡಿಮೆ ಬಡ್ಡಿದರದ ಪ್ರಯೋಜನವನ್ನು ರವಾನಿಸದಿದ್ದರೂ, ಕಡಿಮೆ ಬಡ್ಡಿದರದ ಪರಿಸ್ಥಿತಿಯನ್ನು ಖುಷಿಯಿಂದ ಸ್ವಾಗತಿಸುತ್ತದೆ. ಸರಕುಗಳು ಅಗ್ಗವಾಗುತ್ತಿವೆ ಎಂಬ ಭಾವನೆಯನ್ನು ಕಡಿಮೆ ಬಡ್ಡಿದರ ಮೂಡಿಸುವ ಹಿನ್ನೆಲೆಯಲ್ಲಿ ರಾಜಕಾರಣಿಗಳಿಗೂ ಕಡಿಮೆ ಬಡ್ಡಿ ಆಪ್ಯಾಯಮಾನ. ತೀರಾ ಆಕ್ರಮಣಕಾರಿ ಮನೋಭಾವದ ವ್ಯಕ್ತಿ ಎಂಬ ಟೀಕೆಗೆ ಒಳಗಾದ ಮೊದಲ ಗವರ್ನರ್ ಇವರಲ್ಲ. ಆದರೆ ತಮ್ಮ ನಿಲುವಿಗೆ ಬದ್ಧರಾಗಿ ಅವರು ಸ್ವತಂತ್ರ ಮನೋಭಾವ ವನ್ನು ಪ್ರದರ್ಶಿಸಿದ್ದಾರೆ. ದೇಶದ ಇಂದಿನ ತುರ್ತು ಅಗತ್ಯ ಕೂಡಾ, ಪ್ರಬಲ ಹಾಗೂ ಸ್ವತಂತ್ರ ಆರ್‌ಬಿಐ. ರಾಜನ್ ಅವರು ಬ್ಯಾಂಕಿಂಗ್ ವಲಯವನ್ನು ತಂತ್ರಜ್ಞಾನ ಆಧಾರಿತ ಪಾವತಿ ಬ್ಯಾಂಕ್‌ಗಳಾಗಿ ರೂಪಿಸಿದ್ದಾರೆ. ಜೊತೆಗೆ ಅನುತ್ಪಾದಕ ಸಾಲಗಳನ್ನು ಹೆಚ್ವು ವಾಸ್ತವಿಕವಾಗಿ ಗುರುತಿಸುವಂತೆಯೂ ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ. ಇವೆಲ್ಲವೂ ರಾಜನ್ ಅವರ ಕೊಡುಗೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಇದು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ವರ್ಗಾಯಿಸುವಲ್ಲಿ ಇನ್ನೂ ದೂರ ಕ್ರಮಿಸಬೇಕಿದೆ.
ಆದರೆ ಸದ್ಯದ ಮಟ್ಟಿಗೆ ರಾಜನ್ ಅವರ ನಿರ್ಗಮನ ಖಚಿತವಾಗಿದೆ ಹಾಗೂ ಅವರ ಅರ್ಧದಷ್ಟು ಸಮರ್ಥ ವ್ಯಕ್ತಿ ಈ ಹುದ್ದೆಗೆ ಬರುವುದು ಕೂಡಾ ಸಂದೇಹಾಸ್ಪದ. ಆದರೆ ಮಾರುಕಟ್ಟೆ ಚಲನಶೀಲವಾಗಿದೆ; ಸಂಸ್ಥೆಗಳು ಖಂಡಿತವಾಗಿಯೂ ವ್ಯಕ್ತಿಗಳಿಗಿಂತ ದೊಡ್ಡವು. ಮತ್ತೆ ಹೊಸ ಆರ್‌ಬಿಐ ಗವರ್ನರ್ ಅಧಿಕಾರ ವಹಿಸಿಕೊಳ್ಳುವ ವೇಳೆಗೆ ಮತ್ತೆ ಮಾರುಕಟ್ಟೆಯಲ್ಲಿ ಏರಿಳಿತ ಖಚಿತ. ಆದರೆ ಮುಂದಿನ ಸೆಪ್ಟಂಬರ್ ವೇಳೆಗೆ, ಅಂದರೆ ರಾಜನ್ ಆರ್‌ಬಿಐ ತ್ಯಜಿಸುವ ವೇಳೆಗೆ, ಅವರು ಅಧಿಕಾರ ವಹಿಸಿಕೊಳ್ಳುವಾಗ ಇದ್ದುದಕ್ಕಿಂತ ಉತ್ತಮ ರೂಪವನ್ನು ಮಾರುಕಟ್ಟೆ ಪಡೆದಿರುತ್ತದೆ ಎನ್ನುವುದು ಖಚಿತ.
ಸ್ವಂತ ವಿವೇಚನೆಯ, ಮುಕ್ತ ಮಾತಿನ ಹಾಗೂ ಅದ್ಭುತ ಚಿಂತಕರಾಗಿದ್ದ ರಾಜನ್ ತಾವು ಹಿಂದೆ ಹೇಳಿದಂತೆ, ‘‘ನನ್ನ ಹೆಸರು ರಘುರಾಮ್ ರಾಜನ್ ಹಾಗೂ ನಾನು ಏನು ಮಾಡಬೇಕೋ ಅದನ್ನೇ ಮಾಡುತ್ತೇನೆ’’ ಎಂಬ ಹೇಳಿಕೆಗೆ ಬದ್ಧರಾಗಿಯೇ ನಡೆದುಕೊಂಡವರು.
ಕೃಪೆ: ಸ್ಕ್ರಾಲ್.ಇನ್







