ಕೆಪಿಎಸ್‌ಸಿ ಆಯ್ಕೆ ಪಟ್ಟಿ ರದ್ದು ಸಾಧ್ಯವಿಲ್ಲ: ಹೈಕೋರ್ಟ್
ಬೆಂಗಳೂರು, ಜೂ.21: ಕರ್ನಾ ಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 1998, 1999ಮತ್ತು 2014ರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಲು ಹೈಕೋರ್ಟ್ ವಿಭಾಗೀಯ ಪೀಠ ನಿರಾಕರಿಸಿದೆ. ಈ ಸಂಬಂಧ ಖಲೀಲ್ ಅಹ್ಮದ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕುಮಾರ್ ಮತ್ತು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು. ಈಗಾಗಲೇ ಆಯ್ಕೆ ಆಗಿರುವವರು ಹುದ್ದೆಯಲ್ಲಿ ಮುಂದುವ ರಿಯಲಿ. ಆದರೆ, 1998, 1999 ಹಾಗೂ 2004ನೆ ಸಾಲಿನಲ್ಲಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಪರೀಕ್ಷೆ ಬರೆದು, ಹೆಚ್ಚು ಅಂಕಗಳನ್ನು ಪಡೆದು ಹುದ್ದೆಯಿಂದ ವಂಚಿತರಾಗಿರುವ ಅಭ್ಯರ್ಥಿಗಳಿಗೆ ಎರಡು ತಿಂಗಳಲ್ಲಿ ಸಂದರ್ಶನ ನಡೆಸಬೇಕೆಂದು ನ್ಯಾಯಪೀಠ ಮಹತ್ವದ ತೀರ್ಪು ನೀಡಿತು.
ಸರಕಾರಕ್ಕೆ ನಿಜಕ್ಕೂ ದಕ್ಷ ಅಧಿಕಾರಿಗಳನ್ನು ನೇಮಿಸಬೇಕು, ದೀನ ದಲಿತರಿಗೆ ಒಳ್ಳೆಯದು ಮಾಡಬೇಕು ಅಂತ ಇದ್ದರೆ ಕೆಪಿಎಸ್‌ಸಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸುವಾಗ ಹೋಟಾ ಸಮಿತಿ ವರದಿಯಂತೆ ದಕ್ಷ ಪ್ರಾಮಾಣಿಕರನ್ನು ನೇಮಿಸಬೇಕು. ಅದಕ್ಕೆ ಅಗತ್ಯ ಕಾನೂನು ತಿದ್ದುಪಡಿ ಮಾಡಬೇಕು ಎಂದು ನ್ಯಾಯಪೀಠ ತಿಳಿಸಿದೆ.





