ಹೊಗಳಿಕೆಗೆ ಒಂದಿಷ್ಟು ಮಿತಿ ಇರಲಿ
ಮಾನ್ಯರೆ,
ಹಲವಾರು ವರ್ಷಗಳ ಹಿಂದೆ ಬರುವಾ ಅವರು ‘ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ’ ಎಂಬ ಮಾತನ್ನಾಡಿ ಹಲವರ ಟೀಕೆಗೆ ಗುರಿಯಾಗಿದ್ದರು. ಈಗ ಕೇಂದ್ರದ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡುರವರು ಪ್ರಧಾನ ಮಂತ್ರಿ ಮೋದಿಯವರನ್ನು ‘‘ದೇವರು ಕೊಟ್ಟ ವರ’’ ಎಂದು ಹೊಗಳುತ್ತಾ ತಮ್ಮ ನಿಷ್ಠೆಯನ್ನು ಮೆರೆದಿದ್ದಾರೆ.
ಹೊಗಳಿಕೆಗೆ ಇತಿಮಿತಿಗಳಿರಬೇಕು. ಅಧಿಕಾರಕ್ಕೆ ಬಂದು 2 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ‘ಈ ದೇವರು ಕೊಟ್ಟ ವರ’ದಿಂದ ಯಾವ ರೀತಿಯ ಅನುಕೂಲತೆಗಳು ಜನಸಾಮಾನ್ಯರಿಗೆ, ಅದರಲ್ಲೂ ಬಡವರ ಪಾಲಿಗೆ ಆಗಿದೆ ಎನ್ನುವುದನ್ನು ನಾಯ್ಡು ಒಮ್ಮೆ ಯೋಚಿಸಿ ನೋಡಲಿ. ಕೇಂದ್ರ ಸರಕಾರದಿಂದ ಮಂಡನೆಯಾಗಿರುವ ಮುಂಗಡ ಪತ್ರ ಉಳ್ಳವರ ಹಿತಕ್ಕಾಗಿಯೇ ಇದೆ. ಇನ್ನು ಹಿರಿಯ ನಾಗರಿಕರು ಬ್ಯಾಂಕುಗಳಲ್ಲಿ ಇಟ್ಟಿರುವ ನಿಶ್ಚಿತ ಠೇವಣಿಯ ಬಡ್ಡಿಯ ದರವನ್ನೂ ಕಡಿಮೆ ಮಾಡಿ ಅವರ ಜೇಬಿಗೆ ಕತ್ತರಿ ಹಾಕಿರುವುದು ದೇವರು ಕೊಟ್ಟ ವರದ ಪ್ರಸಾದವಾಗಿದೆ. ಅಲ್ಲದೆ, ವಿವಿಧ ಪ್ರಕಾರಗಳಲ್ಲಿ ತೆರಿಗೆಯನ್ನು ಹಾಕಿ ಜನಸಾಮಾನ್ಯರ ಸಂಪಾದನೆಯ ಶೇ.33ರಷ್ಟು ಭಾಗ ತೆರಿಗೆಯ ರೂಪದಲ್ಲಿ ಪಡೆದುಕೊಳ್ಳುವುದು ದೇವರು ಕೊಟ್ಟ ವರದ ಪ್ರಸಾದವೇ. ಬೇರೆ ಪಕ್ಷಗಳ ಸರಕಾರಗಳಿರುವ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ, ರಾಜಕೀಯ ಅಸ್ಥಿರತೆ ಇವೆಲ್ಲ್ಲಾ ‘ವರ’ದ ಇನ್ನು ಕೆಲವು ರೂಪಗಳು.
ಈ ದೇಶದಲ್ಲಿ ಕ್ಷೀರ ಕ್ರಾಂತಿಯನ್ನು ಮಾಡಿದ, ಶಾಂತಿಯ ಮಂತ್ರ ಜಪಿಸಿ ಸಾಮರಸ್ಯದ ಬದುಕಿಗೆ ನಾಂದಿ ಹಾಡಿದ, ಸಂವಿಧಾನದ ಆಶಯಗಳನ್ನು ನಮಗೆ ನೀಡಿದ, ಭೂದಾನ ಚಳವಳಿಯನ್ನು ನಡೆಸಿದ, ಕುಷ್ಠರೋಗಿಗಳ ಸೇವೆ ಮಾಡಿದ ನೇತಾರರು ದೇವರು ಕೊಟ್ಟ ವರವೇ ಹೊರತು, ಕುಟಿಲ ನೀತಿಗಳ ಮೂಲಕ ಅಧಿಕಾರಕ್ಕೆ ಏರುತ್ತಾ, ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕವಾದ ಎಲ್ಲ ಹೋರಾಟಗಳನ್ನು ದಮನ ಮಾಡುವ ವ್ಯಕ್ತಿಗಳು ಎಂದಿಗೂ ದೇವರು ಕೊಟ್ಟ ವರವಾಗುವುದಿಲ್ಲ.





