ಶುದ್ಧ್ದ ಕುಡಿಯುವ ನೀರಿಗೆ ಆಗ್ರಹಿಸಿ ಮನವಿ

ಶಿಕಾರಿಪುರ, ಜೂ.21: ಕಲುಷಿತ ಕುಡಿಯುವ ನೀರಿನಿಂದಾಗಿ ಪಟ್ಟಣದಾದ್ಯಂತ ಹಲವರು ಕಾಯಿಲೆಯಿಂದ ಬಳಲುತ್ತಿದ್ದು, ಪುರಸಭೆ ಇದುವರೆಗೂ ಈ ಬಗ್ಗೆ ನಿಗಾವಹಿಸದೆ ಜನಸಾಮಾನ್ಯರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಕೃಷ್ಣ ಹುಲಗಿ ಆರೋಪಿಸಿದರು.
ಕಳೆದ ಹಲವು ದಿನಗಳಿಂದ ಪುರಸಭೆಯ ವತಿಯಿಂದ ಪೂರೈಕೆಯಾಗುತ್ತಿರುವ ಕಲ್ಮಶ ಮಣ್ಣು ಮಿಶ್ರಿತ ನೀರಿನ ಬಗ್ಗೆ ಮಂಗಳವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸಂಘಟನೆ ವತಿಯಿಂದ ಪುರಸಭೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೋಟ್ಯಂತರ ರೂ. ವೆಚ್ಚದಲ್ಲಿ ಪಟ್ಟಣಕ್ಕೆ ಅಂಜನಾಪುರ ಜಲಾಶಯದಿಂದ ನೀರು ಸರಬರಾಜಾಗುತ್ತಿದ್ದು, ನೀರನ್ನು ಶುದ್ಧೀಕರಿಸಲು ಪುರಸಭೆಯ ವ್ಯಾಪ್ತಿಯಲ್ಲಿ ಸುಸಜ್ಜಿತ ಶುದ್ಧೀಕರಣ ಕೇಂದ್ರವಿದ್ದರೂ ಜಲಾಶಯದ ನೀರನ್ನು ನೇರವಾಗಿ ಕುಡಿಯಲು ಬಿಡುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, ಕಲ್ಮಷ ಹಾಗೂ ಮಣ್ಣು ಮಿಶ್ರಿತ ನೀರಿನ ಸೇವನೆಯಿಂದಾಗಿ ಪಟ್ಟಣದಲ್ಲಿ ವಾಂತಿಭೇದಿ, ಜ್ವರ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ಶ್ರೀಮಂತರು, ಧನಿಕರು ಮಾತ್ರ ಮಿನರಲ್ ವಾಟರ್ ಬಳಸಲು ಸಾಧ್ಯ.ಬಡವರು,ಮಧ್ಯಮ ವರ್ಗದವರು ಕಲುಷಿತ ನೀರು ಕುಡಿದು ಡೆಂಗ್,ಚಿಕುನ್‌ಗುನ್ಯಾ ಮತ್ತಿತರ ಮಾರಕ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ. ನಂತರ ತಹಶೀಲ್ದಾರ್ ಮೂಲಕ ರಾಜ್ಯದ ಪೌರಕಾರ್ಮಿಕ ಹಾಗೂ ಆರೋಗ್ಯ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಜಯಕರ್ನಾಟಕ ಯುವ ಸಂಘಟನೆಯ ಅಧ್ಯಕ್ಷ ಶಿವಕುಮಾರ್ ಕೋರಿ, ಆಟೊ ಗಿಡ್ಡಪ್ಪ,ರಾಜಶೇಖರ್,ನಝೀರ್‌ಸಾಬ್, ಇಸ್ಮಾಯೀಲ್ ಸಾಬ್,ಶಿವರಾಜ್,ಕಿರಣ್,ರಾಜು,ಪ್ರವೀಣ,ತೋಫಿಕ್,ಮಂಜು,ಝಮೀರ್,ಪ್ರದೀಪ, ಸಂದೀಪ,ವಿನಾಯಕ, ಸುಬ್ರಹ್ಮಣ್ಯ, ಮತ್ತಿತರರು ಉಪಸ್ಥಿತರಿದ್ದರು.







