ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ತೀರ್ಥಹಳ್ಳಿ, ಜೂ.21: ಪಟ್ಟಣದ ಪ್ರತಿಷ್ಠಿತ ನ್ಯಾಷನಲ್ ಗೋಲ್ಡ್ ಪ್ಯಾಲೇಸ್ ವತಿಯಿಂದ ತಾಲೂಕಿನಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂಸ್ಥೆಯಿಂದ ತಾಲೂಕಿನ 168 ವಿದ್ಯಾರ್ಥಿ ಗಳಿಗೆ 3.6 ಲಕ್ಷ ರೂ.ಮೊತ್ತದ ನಗದನ್ನು ನೀಡಿ ಮಾತನಾಡಿದ ಸಂಸ್ಥೆಯ ಮಾಲಕ ಯೂಸ್ು ಹೈದರ್, ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ಸಮಾಜದಲ್ಲಿ ವಿಮರ್ಶೆಗೊಳಪಟ್ಟ ಕಾರ್ಯ ಯೋಜನೆಗಳನ್ನು ಕೈಗೊಳ್ಳಲಿರುವುದರಿಂದ ಉತ್ತಮ ಬದಲಾವಣೆ ಹೊಂದಲು ಸಾಧ್ಯ ಎಂದರು.
ಕೇವಲ ಹಣ ಮಾಡುವ ದೃಷ್ಟಿಯಿಂದ ವಿದ್ಯಾಭ್ಯಾಸ ಮಾಡದೆ ಗುಣ, ನಡತೆಯೊಂದಿಗೆ ಸಮಾಜಮುಖಿಗಳಾಗಿ ಸತ್ಪ್ರಜೆಗಳಾಗಿ ಬಾಳುವ ನಿಟ್ಟಿನಲ್ಲಿ ಬಳಸಿಕೊಂಡು ಸಮಾಜದಲ್ಲಿ ಪ್ರಜ್ಞಾ ವಂತ ನಾಗರಿಕರಾಗಿ ಬೆಳೆಯಲು ಪ್ರಯತ್ನಿಸಿ ಎಂದು ಸಂಸ್ಥೆಯ ಪಾಲುದಾರರಾದ ಡಿ.ಎಸ್.ಅಬ್ದುಲ್ ರೆಹ್ಮಾನ್ ಹೇಳಿದರು.
ಈ ಸಮಾರಂಭದಲ್ಲಿ ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ಡಿ.ಎಸ್.ವಿಶ್ವನಾಥ ಶೆಟ್ಟಿ, ಯಕ್ಷಗಾನ ಅಕಾಡಮಿಯ ಬಿ.ಗಣಪತಿ, ಸಂಸ್ಥೆಯ ಪಾಲುದಾರರಾದ ಅಬ್ದುಲ್ ಕಲಾಂ, ಮೊಯ್ದೀನ್ ಕಬೀರ್, ಮಂಜುನಾಥ ಮಲ್ಯ ಮುಂತಾದವರು ಉಪಸ್ಥಿತರಿದ್ದರು.







