ಕೇಬಲ್ ಟಿವಿ ಸೆಟ್‌ಟಾಪ್ ಬಾಕ್ಸ್ ತಕ್ಷಣ ಅಳವಡಿಸಲು ಜಿಲ್ಲಾಧಿಕಾರಿ ಸೂಚನೆ
ಚಿಕ್ಕಮಗಳೂರು, ಜೂ.21: ಗ್ರಾಮೀಣ ಭಾಗದ ಕೇಬಲ್ ಟಿ.ವಿ ವೀಕ್ಷಕರು ಸೆಟ್ ಟಾಪ್‌ಬಾಕ್ಸ್‌ಗಳನ್ನು ಶೀಘ್ರದಲ್ಲಿಯೇ ಅಳವಡಿಸಿಕೊಳ್ಳಬೇಕು, ತಪ್ಪಿದಲ್ಲಿ ವಾಹಿನಿ ಪ್ರಸಾರದಲ್ಲಿ ಕಡಿತ ಉಂಟಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೆೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೇಬಲ್ ಟಿವಿ ಜಾಲವನ್ನು ಡಿಜಿಟಲ್ ಅಡ್ರೆಸ್ಸೇಬಲ್ ಸಿಸ್ಟಂ ವ್ಯಾಪ್ತಿಗೆ ಒಳಪಡಿಸುವುದಕ್ಕೆ ಸಂಬಂಧಿಸಿದ ಸಭೆೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಬಲ್ ಟಿವಿಗೆ ಡಿಜಿಟಲೀಕರಣದಿಂದಾಗಿ ಟಿವಿಯಲ್ಲಿ ಉತ್ತಮ ಗುಣಮಟ್ಟದ ದೃಶ್ಯಗಳನ್ನು ವೀಕ್ಷಿಸಲು ಸಾಧ್ಯವಾಗುವುದಲ್ಲದೇ ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ತಮಗೆ ಅಗತ್ಯವಿರುವ ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಈಗಾಗಲೇ ನಗರ ವ್ಯಾಪ್ತಿಯಲ್ಲಿ ಪ್ರತಿ ಶತ ನೂರರಷ್ಟು ಡಿಜಿಟಲ್ ಬಾಕ್ಸ್‌ಗಳನ್ನು ಗ್ರಾಹಕರು ಅಳವಡಿಸಿಕೊಂಡಿದ್ದಾರೆ. ಡಿಜಿಟಲ್ ಬಾಕ್ಸ್‌ಗಳನ್ನು ಅಳವಡಿಸಿಕೊಳ್ಳದೇ ಇರುವಂತಹ ಚಂದಾದಾರರಿಗೆ ಪ್ರಸಾರವನ್ನು ಕಡಿತಗೊಳಿಸಲಾಗಿದೆ. ಗ್ರಾಮೀಣ ಭಾಗದ ಕೇಬಲ್ ನೆಟ್‌ವರ್ಕ್ ಬಳಕೆದಾರರು ಶೀಘ್ರದಲ್ಲಿ ಸೆಟ್‌ಟಾಪ್ ಬಾಕ್ಸ್‌ಗಳನ್ನು ಅಳವಡಿಸಿಕೊಳ್ಳಬೇಕೆಂದರು. ಟೆಲಿವಿಜನ್ ನೆಟ್‌ವರ್ಕ್ ಕಾಯ್ದೆ ಅನ್ವಯ ದೇಶದಾದ್ಯಂತ ಇರುವ ಕೇಬಲ್ ಟಿವಿ ಆಪರೇಟರ್‌ಗಳು ಕೆಲವೊಂದು ವಾಹಿನಿಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕಿದೆ,ಸಾರ್ವಜನಿಕರು ಸೆಟ್‌ಟಾಪ್ ಬಾಕ್ಸ್ ಅಳವಡಿಸಿಕೊಳ್ಳುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು.
ಕೇಬಲ್ ಟಿ.ವಿ.ಆಪರೇಟರ್‌ಗಳು ತಮ್ಮ ಚಂದಾದಾರರ ಮಾಹಿತಿಯನ್ನು ಒಳಗೊಂಡ ರಿಜಿಸ್ಟರ್ ಅನ್ನು ನಿರ್ವಹಣೆ ಮಾಡಬೇಕು ಎಂದ ಅವರು,ಇವುಗಳನ್ನು ಉಪವಿಭಾಗಾಧಿಕಾರಿಗಳಿಂದ ಪರಿಶೀಲನೆ ಶೀಘ್ರದಲ್ಲಿಯೇ ನಡೆಸಲಾಗುವುದು ಎಂದರು.
ಕೇಬಲ್ ಟಿ.ವಿ.ಆಪರೇಟರ್‌ಗಳು ಸೆಟ್‌ಟಾಪ್ ಬಾಕ್ಸ್‌ಗಳನ್ನು ಅಳವಡಿಸುವಾಗ ಸಾರ್ವಜನಿಕರಿಂದ ಮಾರುಕಟ್ಟೆಯಲ್ಲಿ ನಿಗಧಿಪಡಿಸಿರುವ ದರವನ್ನು ಮಾತ್ರ ಪಡೆಯಬೇಕೆಂದು ತಿಳಿಸಿದರು.
ಸಭೆಯಲ್ಲಿ ವಾರ್ತಾಧಿಕಾರಿ ಬಿ.ಮಂಜುನಾಥ, ಶಿರಸ್ತೇದಾರ್ ಚೇತನ್ ಹಾಗೂ ಜಿಲ್ಲೆಯ ಕೇಬಲ್ ಆಪರೇಟರ್‌ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.







