ಸಾರ್ವಜನಿಕರ ಕುಂದುಕೊರತೆ, ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ: ಮಂಜುನಾಥ್
ಚಿಕ್ಕಮಗಳೂರು, ಜೂ.21: ಸಾರ್ವಜನಿಕರ ಕುಂದುಕೊರತೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಮಂಜುನಾಥ್ ತೇರದಾಳ್ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ಶಿಬಿರ ಹಾಗೂ ಇನ್ನು ಮುಂತಾದ ಹಲವು ಯೋಜ ನೆಗಳನ್ನು ನಡೆಸಲು ಸಂಘಟನೆ ಗುರಿ ಹೊಂದಿದೆ ಎಂದರು.
ಜಿಲ್ಲೆಯಲ್ಲಿ ರಕ್ಷಣಾ ವೇದಿಕೆಯನ್ನು ಸದೃಢವಾಗಿ ಕಟ್ಟಲು ಕಟಿಬದ್ಧರಾಗಿದ್ದು, ಈಗಾಗಲೇ ಎಲ್ಲಾ ತಾಲೂಕುಗಳಿಗೂ ಪ್ರವಾಸ ಕೈಗೊಂಡು ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸಂಘಟನೆಗೆ ಶಕ್ತಿ ತುಂಬಲು ನಿರ್ಧರಿಸಲಾಗಿದೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಹಾಗೂ ಕೆಲವು ಇಲಾಖೆಗಳಿಂದ ಆಗಬೇಕಾದ ಸಾರ್ವಜನಿಕರ ಕೆಲಸಗಳ ಬಗ್ಗೆ ದೂರು ಬಂದಲ್ಲಿ ಸರ್ಮಪಕವಾಗಿ ಸ್ಪಂದಿಸಿ ಕೆಲಸ ಮಾಡುವುದಾಗಿ ತಿಳಿಸಿದರು.
ಮುಂಗಾರು ಮಳೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಸ್ವಚ್ಛತೆಗೆ ಆದ್ಯ ಗಮನ ನೀಡಿ ಖಾಯಿಲೆ ಹರಡದಂತೆ ಎಚ್ಚರ ವಹಿಸಲು ನಾಗರಿಕರಲ್ಲಿ ಸಂಘಟನೆ ವತಿಯಿಂದ ಅರಿವು ಮೂಡಿಸಲಾಗುವುದು. ಜಿಲ್ಲೆಯ 7 ತಾಲೂಕುಗಳಲ್ಲಿ ಕನಿಷ್ಠ 2000 ಸದಸ್ಯರನ್ನು ನೋಂದಾಯಿಸಿಕೊಳ್ಳಲು ಸಂಘಟನೆ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಸ್ತುವಾರಿ ವಹಿಸಿರುವ ಜೆನ್ನಿಕ್ಲಾಸ್ ಡೇವಿಡ್ ಮಾತನಾಡಿ, ವೇದಿಕೆಯ ರಾಜ್ಯಾಧ್ಯಕ್ಷರ ಆದೇಶದಂತೆ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾಧ್ಯಕ್ಷರಾಗಿ ಮಂಜುನಾಥ್ ತೇರದಾಳ್, ಜಿಲ್ಲಾ ಕಾರ್ಯಧ್ಯಕ್ಷರಾಗಿ ವಿನೋದ್ ಕುಮಾರ್ ಪಿ.ಆರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರೇಗೌಡ ಕೋಟೆ, ಚಿಕ್ಕಮಗಳೂರು ನಗರಾಧ್ಯಕ್ಷರಾಗಿ ರಾಘವೇಂದ್ರ ಕೋಟೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷರಾದ ನವೀನ್‌ಗೌಡ, ಡೊನಾಲ್ಡ್ ಭರತ್ ಪಿಂಟೋ, ಪ್ರಧಾನ ಕಾರ್ಯದರ್ಶಿ ವಿಜೇಂದ್ರ ಆಚಾರ್ಯ ಮತ್ತಿತರಿದ್ದರು.







