‘ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ 24,972 ಅರ್ಜಿಗಳು ವಿಲೇವಾರಿ: ಅಪರ ಡಿಸಿ
ಹಕ್ಕು ಪತ್ರ ಪಡೆಯಲು 1,008 ಯೋಗ್ಯ ಕುಟುಂಬಗಳು
ಸಾಗರ, ಜೂ.21: ಶಿವಮೊಗ್ಗ ಜಿಲ್ಲೆಯಲ್ಲಿ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಕೋರಿ 85,518 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 24,972 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ವಿಲೇವಾರಿಯಾದ ಅರ್ಜಿಗಳು ಪೈಕಿ 1,008 ಅರ್ಜಿಗಳು ಹಕ್ಕುಪತ್ರ ಪಡೆಯಲು ಯೋಗ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪಹೇಳಿದರು. ಇಲ್ಲಿನ ಉಪವಿಭಾಗಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಅರಣ್ಯಹಕ್ಕು ಕಾಯ್ದೆ ಸಂಬಂಧ ಪಟ್ಟಂತೆ ಉಪವಿಭಾಗೀಯ ಮಟ್ಟದ ಅರ್ಜಿ ಪರಿಶೀಲನಾ ಸಮಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪರಿಶೀಲನೆಗೆ ಒಳಪಟ್ಟ 24, 972 ಅರ್ಜಿಗಳ ಪೈಕಿ 23,964 ಅರ್ಜಿಗಳು ಬೇರೆಬೇರೆ ಕಾರಣಗಳಿಂದ ತಿರಸ್ಕರಿಸಲ್ಪಟ್ಟಿದೆ. ಎರಡನೆ ಸುತ್ತಿನಲ್ಲಿ 21,515 ಅರ್ಜಿಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ ಎಂದರು.
ಶಿವಮೊಗ್ಗ ಉಪವಿಭಾಗ ಮಟ್ಟದ ಸಭೆಯು ಜೂ. 22ರಂದು ನಡೆಯಲಿದ್ದು, ಇದೇ ದಿನ ಸಾಗರದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಾಗರ ಉಪವಿಭಾಗ ಮಟ್ಟದಲ್ಲಿ ಆಯ್ಕೆಯಾದ ಅರ್ಜಿಗಳ ಅಂತಿಮ ಪರಿಶೀಲನೆ ನಡೆಯಲಿದೆ ಎಂದು ಹೇಳಿದರು. ಸಾಗರ ಹಾಗೂ ಶಿವಮೊಗ್ಗ ಉಪವಿಭಾಗ ಮಟ್ಟದ ಸಮಿತಿ ಸಭೆಯು ಜೂ. 24ರಂದು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮದ ದಿನಾಂಕವನ್ನು ನಿಗದಿಪಡಿಸ ಲಾಗುವುದು ಎಂದು ಮಾಹಿತಿ ನೀಡಿದರು.
ಈ ವೇಳೆ ಉಪವಿಭಾಗಾಧಿಕಾರಿ ಡಿ.ಎಂ. ಸತೀಶ ಕುಮಾರ್ ಮಾತನಾಡಿ, ನಮ್ಮ ಉಪವಿಭಾಗ ವ್ಯಾಪ್ತಿಯಲ್ಲಿ ಅರಣ್ಯಹಕ್ಕು ಕಾಯ್ದೆ ಅನುಷ್ಠಾನಕ್ಕೆ ವಿಧಾನಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ ಅವರ ಸೂಚನೆ ಮೇರೆಗೆ ಅರ್ಜಿ ವಿಲೇವಾರಿ ಕಾರ್ಯ ಪ್ರಗತಿ
ುಲ್ಲಿತ್ತು. ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಅರ್ಜಿ ಗಳನ್ನು ಹೊರತುಪಡಿಸಿ ಅರಣ್ಯ ಭೂಮಿಯಲ್ಲಿ ವಾಸವಾಗಿರುವವರು ಸಲ್ಲಿಸಿರುವ ಅರ್ಜಿಗಳು ಪರಿಶೀಲ ನೆಯ ಅಂತಿಮ ಹಂತದಲ್ಲಿದೆ. ಇನ್ನು ಸ್ವಲ್ಪಭಾಗ ಸರ್ವೇ ಕಾರ್ಯ ನಡೆಯಬೇಕಾಗಿದ್ದು, ಅದನ್ನು ತ್ವರಿತವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದರು. ರಾಜ್ಯ ಸರಕಾರ ಜೂನ್ 30ರೊಳಗೆ ಅರ್ಜಿ ವಿಲೇವಾರಿ ಮಾಡುವ ಸುತ್ತೋಲೆ ಹೊರಡಿಸಿದೆ. ಆರಂಭದಲ್ಲಿ ಎಸ್ಟಿ ಜನಾಂಗದವರಿಗೆ ಆದ್ಯತೆ ಮೇಲೆ ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ಅರ್ಜಿ ಪರಿಶೀಲನೆ ನಡೆಸಲಾಗುತ್ತಿದೆ. ಇದರ ಜೊತೆಗೆ ಇತರರಿಗೂ ಹಕ್ಕುಪತ್ರ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಅರಣ್ಯಹಕ್ಕು ಸಮಿತಿಯಲ್ಲಿ ಅರ್ಜಿ ತಿರಸ್ಕೃತವಾಗಿದ್ದರೆ, ಅಂತಹ ಅರ್ಜಿದಾರರು ಉಪವಿಭಾಗ ಮಟ್ಟದ ಸಮಿತಿಗೆ ಅರ್ಜಿ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು. ಅರಣ್ಯಹಕ್ಕು ಸಮಿತಿ ಸದಸ್ಯೆ ಜ್ಯೋತಿ ಮುರಳಿಧರ್ ಮಾತನಾಡಿ, ಅರ್ಜಿ ಸಲ್ಲಿಸುವ ದಿನಾಂಕವನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ. ಕೆಲವು ಗ್ರಾಮಗಳಿಗೆ ಈ ಬಗ್ಗೆ ಸರಿಯಾದ ಮಾಹಿತಿ ತಲುಪಿಲ್ಲ. ಕೆಲವು ಅರ್ಜಿಗಳನ್ನು ಅಧಿಕಾರಿಗಳು ಸುಖಾಸುಮ್ಮನೆ ತಿರಸ್ಕಾರ ಮಾಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳಿಗೆ ಅಲ್ಲಿನ ವಸ್ತುಸ್ಥಿತಿ ಅರಿವಿರುತ್ತದೆ. ಅದನ್ನು ಉಪವಿಭಾಗೀಯ ಸಮಿತಿ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸಭೆಯನ್ನು ಒತ್ತಾಯಿಸಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಧರ್ಮಪ್ಪ, ಅರಣ್ಯಹಕ್ಕು ಸಮಿತಿ ಸದಸ್ಯರಾದ ಮಮತಾ, ಜಿ.ಬಿ. ಚಂದ್ರಮೌಳಿ, ತಹಶೀಲ್ದಾರ್ ಎನ್.ಟಿ. ಧರ್ಮೋಜಿರಾವ್, ಸಹಾಯಕ ಅರಣ್ಯಾಧಿಕಾರಿ ವೆಂಕಟೇಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







