ಭಾರತ-ಝಿಂಬಾಬ್ವೆಗೆ ನಿರ್ಣಾಯಕ ಪಂದ್ಯ
ಇಂದು ಮೂರನೆ ಹಾಗೂ ಅಂತಿಮ ಟ್ವೆಂಟಿ-20

ಹರಾರೆ, ಜೂ.21: ಝಿಂಬಾಬ್ವೆ ವಿರುದ್ಧ ಎರಡನೆ ಪಂದ್ಯದಲ್ಲಿ 10 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿ ಟ್ವೆಂಟಿ-20 ಸರಣಿಯಲ್ಲಿ ಸಮಬಲ ಸಾಧಿಸಿರುವ ಭಾರತ ತಂಡ ಬುಧವಾರ ಮೂರನೆ ಹಾಗೂ ಅಂತಿಮ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲು ಸಜ್ಜಾಗಿದೆ.
ಭಾರತ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡು ಟ್ವೆಂಟಿ-20 ಸರಣಿ ಆಡಲು ಬಂದಿತ್ತು. ಶನಿವಾರ ನಡೆದ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 2 ರನ್ ಅಂತರದಿಂದ ಸೋತು ಆಘಾತ ಅನುಭವಿಸಿತ್ತು.
ಎರಡನೆ ಪಂದ್ಯದಲ್ಲಿ ತಪ್ಪನ್ನು ತಿದ್ದಿಕೊಂಡ ಪ್ರವಾಸಿ ಭಾರತ ತಂಡ 10 ವಿಕೆಟ್‌ಗಳ ಅಂತರದಿಂದ ಸುಲಭ ಜಯ ಸಾಧಿಸಿತ್ತು. ಬುಧವಾರ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಳ್ಳಲು ಎದುರು ನೀಡುತ್ತಿದೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡದಲ್ಲಿ ಯುವ ಆಟಗಾರರು ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಬರಿಂದರ್ ಸ್ರಾನ್, ಮನ್‌ದೀಪ್ ಸಿಂಗ್, ಕೆ.ಎಲ್.ರಾಹುಲ್ ಹಾಗೂ ಜಸ್‌ಪ್ರಿತ್ ಬುಮ್ರಾ ಲಭಿಸಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.
ಸ್ರಾನ್ ಝಿಂಬಾಬ್ವೆಯ ವಿರುದ್ಧ ಸೋಮವಾರ ನಡೆದ ಚೊಚ್ಚಲ ಪಂದ್ಯದಲ್ಲಿ ಜೀವನಶ್ರೇಷ್ಠ ಬೌಲಿಂಗ್ ಮಾಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಮನ್‌ದೀಪ್ ಸಿಂಗ್ ಹಾಗೂ ರಾಹುಲ್ ಅಮೂಲ್ಯ ಕಾಣಿಕೆ ನೀಡಿ ಸಾಕಷ್ಟು ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ದಡ ಸೇರಿಸಿದ್ದರು.
ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಸ್ರಾನ್‌ಗೆ ಉತ್ತಮ ಸಾಥ್ ನೀಡಿದ್ದ ಬುಮ್ರಾ 3 ವಿಕೆಟ್‌ಗಳನ್ನು ಉಡಾಯಿಸಿದ್ದರು.
ಮನ್‌ದೀಪ್ ಬಾರಿಸಿದ ಚೊಚ್ಚಲ ಅರ್ಧಶತಕದ ನೆರವಿನಿಂದ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮೊದಲ ಬಾರಿ 10 ವಿಕೆಟ್‌ಗಳ ಜಯ ಸಂಪಾದಿಸಿದ್ದ ಭಾರತ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಧೋನಿ ಪಡೆ ಎದುರಾಳಿ ಝಿಂಬಾಬ್ವೆ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಮೊದಲ ಪಂದ್ಯದಲ್ಲಿ ನೀಡಿದ ಪ್ರದರ್ಶನವನ್ನು ಭಾರತ ಮರೆಯಬಾರದು.
ಟೀಮ್ ನ್ಯೂಸ್:
ವಿಕೆಟ್ ಕೀಪರ್ ರಿಚ್ಮಂಡ್ ಮುತುಂಬಮಿ ಎರಡನೆ ಪಂದ್ಯದ ವೇಳೆ ಗಾಯಗೊಂಡಿರುವ ಕಾರಣ ಅವರ ಬದಲಿಗೆ ಪೀಟರ್ ಮೂರ್ ಝಿಂಬಾಬ್ವೆಯ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ಅಲ್‌ರೌಂಡರ್ ಟಿ.ಮುತೊಂಬಝಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಭಾರತ ತನ್ನ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ.
ಅಂಕಿ-ಅಂಶ
*ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವರ್ಷವೊಂದರಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಆಸ್ಟ್ರೆಲಿಯದ ಡರ್ಕ್ ನ್ಯಾನೆಸ್ ದಾಖಲೆಯನ್ನು ಸರಿಗಟ್ಟಲು ಜಸ್‌ಪ್ರೀತ್ ಬುಮ್ರಾಗೆ ಇನ್ನು 3 ವಿಕೆಟ್ ಅಗತ್ಯವಿದೆ. ನ್ಯಾನೆಸ್ 2010ರಲ್ಲಿ ಒಟ್ಟು 27 ವಿಕೆಟ್ ಉರುಳಿಸಿದ್ದರು. ಬುಮ್ರಾ ಈ ವರ್ಷ ಆಡಿರುವ 18 ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿದ್ದಾರೆ.
*ಝಿಂಬಾಬ್ವೆಯ ಹಿರಿಯ ದಾಂಡಿಗ ಮಸಕಝ 50ನೆ ಟ್ವೆಂಟಿ-20 ಪಂದ್ಯ ಆಡಲಿದ್ದಾರೆ. ಮಸಕಝ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚು ಪಂದ್ಯಗಳನ್ನಾಡುತ್ತಿರುವ ಝಿಂಬಾಬ್ವೆಯ ಮೊದಲ ಆಟಗಾರ.
*ಭಾರತ ಎರಡನೆ ಟ್ವೆಂಟಿ-20ಯಲ್ಲಿ ಮೊದಲ ಬಾರಿ 10 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಪಿಚ್ ಪರಿಸ್ಥಿತಿ
ಹರಾರೆ ಸ್ಪೋರ್ಟ್ ಕ್ಲಬ್‌ನಲ್ಲಿ ಆಡಲಾಗಿರುವ ಈವರೆಗಿನ ಎರಡು ಟ್ವೆಂಟಿ-20 ಪಂದ್ಯಗಳಲ್ಲಿ ಬೌಂಡರಿ ಮುಖ್ಯ ಪಾತ್ರವಹಿಸಿದೆ. ಒಂದು ವೇಳೆ ಝಿಂಬಾಬ್ವೆಯ ಅಗ್ರ ಕ್ರಮಾಂಕದ ಸಿಡಿದೆದ್ದರೆ, ಫೈನಲ್ ಪಂದ್ಯ ಗರಿಷ್ಠ ಸ್ಕೋರ್‌ನಿಂದ ಕೂಡಿರಲಿದೆ.
ಸಮಯ: ಸಂಜೆ 4:30







