ಪ್ರತಿ ಪಂ.ವ್ಯಾಪ್ತಿಯಲ್ಲಿ ದೇವರಾಜ ಅರಸು ಭವನ: ಶಾಸಕ ಜಿ.ಎಚ್. ಶ್ರೀನಿವಾಸ್
ತರೀಕೆರೆ: ಪ್ರಗತಿ ಪರಿಶೀಲನಾ ಸಭೆ

ತರೀಕೆರೆ, ಜೂ.21: ದೇವರಾಜ ಅರಸು ಭವನ ನಿರ್ಮಾಣಕ್ಕೆ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ಒದಗಿಸಿಕೊಟ್ಟಲ್ಲಿ ಶೀಘ್ರ ಅನುದಾನ ನೀಡಲಾಗುವುದು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಮುರಾರ್ಜಿ ವಸತಿ ಶಾಲೆ ಪ್ರತಿ ಹೋಬಳಿಗೆ ಒಂದರಂತೆ ನೀಡುವ ಬಗ್ಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದೆ. 2013ರಲ್ಲಿ ಐದು ಅಂಬೇಡ್ಕರ್ ಭವನಗಳನ್ನು ಮಂಜೂರು ಮಾಡಲಾಗಿತ್ತು. 2014-15 ರಲ್ಲಿ 39 ಅಂಬೇಡ್ಕರ್ ಭವನವನ್ನು ಮಂಜೂರು ಮಾಡಲಾಗಿದ್ದು, ಮುಂದಿನ 15 ದಿನಗಳೊಳಗಾಗಿ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ವೈದ್ಯರಿಗೆ ಕಳೆದ ಎಂಟು ತಿಂಗಳಿನಿಂದ ವೇತನ ನೀಡಿಲ್ಲ ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರಸನ್ನ ಸಣ್ಣಕ್ಕಿ ಜಿಲ್ಲಾ ಮತ್ತು ತಾಲೂಕು ಪಂಚಾ ಯತ್‌ನಿಂದ ಈವರೆಗೂ ಅನುದಾನ ಬಂದಿರಲಿಲ್ಲ. ಈಗ ಅನುದಾನ ಬಂದಿದ್ದು ವೇತನ ವಿತರಿಸಲಾಗಿದೆ ಎಂದರು.ಮಧ್ಯಾಹ್ನದ ಬಿಸಿಯೂಟ ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳನ್ನು ಸರಿಯಾದ ತೂಕದಲ್ಲಿ ಒದಗಿಸಬೇಕು ಹಾಗೂ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನೇ ಮಕ್ಕಳಿಗೆ ನೀಡಬೇಕೆಂದು ಆಗ್ರಹಿಸಿದರು.
ಬಿಸಿಯೂಟ ತಯಾರಿಕೆಗೆ ಸರಬರಾಜು ಮಾಡುತ್ತಿರುವ ಆಹಾರ ಧಾನ್ಯಗಳಾದ ತೊಗರಿಬೇಳೆ ಕಳಪೆ ಗುಣಮಟ್ಟದ್ದಾಗಿದೆ. ಜಿಲ್ಲಾ ಮಟ್ಟದ ಟೆಂಡರ್‌ದಾರರ ಸರಬರಾಜನ್ನು ತಿರಸ್ಕರಿಸುವಂತೆ ಜಿಪಂ ಅಧ್ಯಕ್ಷೆ ಚೈತಶ್ರೀ ಮಾಲತೇಶ್ ಸಭೆಯಲ್ಲಿ ಆಗ್ರಹಿಸಿದರು. ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಶಿವಮ್ಮ ಕೃಷ್ಣಮೂರ್ತಿ, ಯೋಜನಾಧಿಕಾರಿ ವಿಠಲ್, ಕಾರ್ಯನಿರ್ವಹಣಾಧಿಕಾರಿ ಗಂಗಾಧರಮೂರ್ತಿ ಜಿ.ಪಂ.ಸದಸ್ಯರು ಉಪಸ್ಥಿತರಿದ್ದರು.







