ಕೋಚ್ ಹುದ್ದೆಗೆ ಚಾಪೆಲ್ ಹೆಸರು ಶಿಫಾರಸು ಮಾಡಿ ತಪ್ಪೆಸಗಿದ್ದೆ: ಗಂಗುಲಿ
ಕೋಲ್ಕತಾ,ಜೂ.21: ‘‘ಆಸ್ಟ್ರೇಲಿಯದ ಗ್ರೆಗ್ ಚಾಪೆಲ್ ಹೆಸರನ್ನು 2005ರಲ್ಲಿ ಭಾರತದ ಕೋಚ್ ಹುದ್ದೆಗೆ ಶಿಫಾರಸು ಮಾಡಿ ದೊಡ್ಡ ತಪ್ಪು ಮಾಡಿದ್ದೆ. ನಾನು ಮತ್ತೊಮ್ಮೆ ಅಂತಹ ತಪ್ಪನ್ನು ಮಾಡಲಾರೆ’’ ಎಂದು ಟೀಮ್ ಇಂಡಿಯಾಕ್ಕೆ ನೂತನ ಮುಖ್ಯ ಕೋಚ್ ಹುದ್ದೆ ಆಯ್ಕೆ ಮಾಡುವ ಹೊಣೆ ಹೊತ್ತಿರುವ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಹೇಳಿದ್ದಾರೆ.
ಎರಡು ವರ್ಷಗಳ ಕಾಲ ಭಾರತದ ಕೋಚ್ ಆಗಿದ್ದ ಗ್ರೆಗ್ ಚಾಪಲ್ ಆಗಿನ ನಾಯಕ ಗಂಗುಲಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ. ನಾನು, ಸಚಿನ್ ಹಾಗೂ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಈ ಬಾರಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಶ್ವಾಸವಿದೆ. ಅದೃಷ್ಟವಶಾತ್ ನಮಗೆ ಬಿಸಿಸಿಐ ಕಾರ್ಯದರ್ಶಿ(ಅಜಯ್ ಶಿರ್ಕೆ) ಹಾಗೂ ಅಧ್ಯಕ್ಷರು(ಅನುರಾಗ್ ಠಾಕುರ್) ಬೆಂಬಲವೂ ಲಭಿಸಿದೆ. ನಾವೆಲ್ಲರೂ ಒಟ್ಟಾಗಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದೇವೆ ಎಂದು ಗಂಗುಲಿ ನುಡಿದರು.
‘‘ನಿಜ ಹೇಳಬೇಕೆಂದರೆ, ಎರಡೂವರೆ ವರ್ಷಗಳ ಹಿಂದೆ ನನ್ನ ಮನಸ್ಸಲ್ಲೂ ಕೋಚ್ ಆಗಬೇಕೆಂಬ ಯೋಚನೆ ಮೂಡಿತ್ತು. ಇದೀಗ ನಾನು ಕೋಚ್ ಆಯ್ಕೆ ಮಾಡುವ ಜವಾಬ್ದಾರಿ ಪಡೆದಿದ್ದೇನೆ. ನಾನು ಈತನಕ ಸಂದರ್ಶನ ನೀಡಿಲ್ಲ. ಸಂದರ್ಶನ ನೀಡುವ ಸಮಯ ಬರಬಹುದು’’ ಎಂದು ಗಂಗುಲಿ ಹೇಳಿದ್ದಾರೆ.





