ಮನೋಜ್, ಸುಮಿತ್ ಕ್ವಾರ್ಟರ್ ಫೈನಲ್‌ಗೆ ಒಲಿಂಪಿಕ್ಸ್‌ಗೆ: ಇನ್ನು ಒಂದೇ ಹೆಜ್ಜೆ ಬಾಕಿ
ವಿಶ್ವ ಬಾಕ್ಸಿಂಗ್ ಅರ್ಹತಾ ಟೂರ್ನಮೆಂಟ್
ಬಾಕು(ಅಝೆರ್‌ಬೈಜಾನ್), ಜೂ.21: ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್‌ನ(ಎಐಬಿಎ)ವಿಶ್ವ ಅರ್ಹತಾ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿರುವ ಭಾರತದ ಮನೋಜ್ ಕುಮಾರ್ (64ಕೆಜಿ) ಹಾಗೂ ಸುಮಿತ್ ಸಾಂಗ್ವಾನ್(81 ಕೆಜಿ) ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದರಿಂದ ಕೇವಲ ಒಂದು ಹೆಜ್ಜೆ ಹಿಂದಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಬಾಕ್ಸರ್ ಮನೋಜ್ ಬಲ್ಗೇರಿಯದ ಇಸ್ಮೆಟೆವಾರನ್ನು 2-1 ಅಂತರದಿಂದ ಮಣಿಸಿದರೆ, ಮತ್ತೊಂದು ಪಂದ್ಯದಲ್ಲಿ ಸುಮಿತ್ ಮಂಗೋಲಿಯದ ಸ್ಯಾಂಡಗ್‌ಸರೆನ್‌ರನ್ನು 3-0 ಅಂತದಿಂದ ಮಣಿಸುವುದರೊಂದಿಗೆ ಕ್ವಾರ್ಟರ್ ಫೈನಲ್‌ಗೆ ಏರಿದರು. ಗುರುವಾರ ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಈ ಇಬ್ಬರು ಆಟಗಾರರು ಒಲಿಂಪಿಕ್ಸ್ ಟಿಕೆಟನ್ನು ದೃಢಪಡಿಸಲಿದ್ದಾರೆ.
ಮನೋಜ್ ಕಠಿಣ ಹೋರಾಟ ನೀಡಿದ್ದಾರೆ. ಅವರ ಎದುರಾಳಿ ತುಂಬಾ ಚಾಣಾಕ್ಷ ಬಾಕ್ಸರ್. ಆದರೆ ಎರಡನೆ ಸುತ್ತಿನಲ್ಲಿ ಮನೋಜ್ ತಿರುಗೇಟು ನೀಡಿ ಪಂದ್ಯವನ್ನು ಗೆದ್ದುಕೊಂಡರು ಎಂದು ಬಾಕ್ಸಿಂಗ್ ಕೋಚ್ ಗುರ್ಬಾಕ್ಸ್ ಸಿಂಗ್ ಸಂಧು ಹೇಳಿದ್ದಾರೆ.
ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ಹಿಂದೆ ಕಂಚಿನ ಪದಕವನ್ನು ಜಯಿಸಿದ್ದ ವಿಕಾಸ್ ಕೃಷ್ಣನ್(75ಕೆಜಿ) ಜಪಾನ್‌ನ ತಕಹಶಿ ಮಕೊಟೊರನ್ನು 3-0 ಅಂತರದಿಂದ ಮಣಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದರು.
ಈ ಟೂರ್ನಮೆಂಟ್‌ನಲ್ಲಿ 39 ಅರ್ಹತಾ ಸ್ಥಾನಗಳಿದ್ದು, 49ಕೆಜಿ ವಿಭಾಗದಲ್ಲಿ 2, 52ಕೆಜಿ, 56 ಕೆಜಿ, 60 ಕೆಜಿ, 64 ಕೆಜಿ, 69 ಕೆಜಿ, 75 ಕೆಜಿ ಹಾಗೂ 81 ಕೆಜಿ ವಿಭಾಗದಲ್ಲಿ ತಲಾ ಐದು , 91 ಕೆಜಿ ಹಾಗೂ +91ಕೆಜಿ ವಿಭಾಗದಲ್ಲಿ ತಲಾ ಒಂದು ಸ್ಥಾನ ಖಾಲಿಯಿದೆ. 100 ದೇಶಗಳ 400ಕ್ಕೂ ಅಧಿಕ ಬಾಕ್ಸರ್‌ಗಳು ಸ್ಪರ್ಧಾಕಣದಲ್ಲಿದ್ದಾರೆ







