ಕುಂಬ್ಳೆ, ಪ್ರವೀಣ್ ಆಮ್ರೆ ಸಂದರ್ಶನ
ಟೀಮ್ ಇಂಡಿಯಾ ಕೋಚ್ ಹುದ್ದೆ

ಕೋಲ್ಕತಾ, ಜೂ.21: ಬಿಸಿಸಿಐನ ಮೂವರು ಸದಸ್ಯರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು(ಸಿಎಸಿ) ಭಾರತದ ಕೋಚ್ ಹುದ್ದೆಗಾಗಿ ನಗರದ ಹೊಟೇಲ್‌ನಲ್ಲಿ ಮಂಗಳವಾರ ಸಂದರ್ಶನ ನಡೆಸಿದ್ದು, ದೀರ್ಘಕಾಲದಿಂದ ನಡೆಯುತ್ತಿದ್ದ ಕೋಚ್ ಅಭ್ಯರ್ಥಿಗಳ ಹುಡುಕಾಟ ಕೊನೆಯ ಹಂತ ತಲುಪಿದೆ.
ಸೌರವ್ ಗಂಗುಲಿ, ವಿವಿಎಸ್ ಲಕ್ಷ್ಮಣ್ ಹಾಗೂ ಸಚಿನ್ ತೆಂಡುಲ್ಕರ್ ಅವರಿದ್ದ ತ್ರಿಸದಸ್ಯ ಸಮಿತಿ ಮ್ಯಾರಥಾನ್ ಸಂದರ್ಶನದಲ್ಲಿ ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ, ಮಾಜಿ ನಿರ್ದೇಶಕ ರವಿಶಾಸ್ತ್ರಿ, ಮಾಜಿ ಕ್ರಿಕೆಟಿಗರಾದ ಪ್ರವೀಣ್ ಆಮ್ರೆ ಹಾಗೂ ಲಾಲ್ ಚಂದ್ ರಾಜ್‌ಪೂತ್‌ರನ್ನು ಮಾತನಾಡಿಸಿತು.
ಲಂಡನ್‌ನಲ್ಲಿರುವ ತೆಂಡುಲ್ಕರ್ ಟೆಲಿಕಾನ್ಫರೆನ್ಸ್ ಮೂಲಕ ಕೋಚ್ ಅಭ್ಯರ್ಥಿಗಳ ಸಂದರ್ಶನ ನಡೆಸಿದರು. ಕೋಚ್ ಅಭ್ಯರ್ಥಿಗಳ ಆಯ್ಕೆಗೆ ಗಂಗುಲಿ, ಲಕ್ಷ್ಮಣ್ ಹಾಗೂ ತೆಂಡುಲ್ಕರ್‌ಗೆ ಮಾಜಿ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು.
ಕುಂಬ್ಳೆ ಸಂದರ್ಶನಕ್ಕೆ ಖುದ್ದು ಹಾಜರಾದರು.ಪ್ರತಿಷ್ಠಿತ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಟೀಮ್ ಇಂಡಿಯಾದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ವಿದೇಶದಲ್ಲಿರುವ ಕಾರಣ ಸಂದರ್ಶನಕ್ಕೆ ಹಾಜರಾಗಿರಲಿಲ್ಲ. ಅವರನ್ನು ವಿಡಿಯೋ ಕಾನ್ಫರೆನ್ಸ್‌ನ ಮೂಲಕ ಸಂದರ್ಶಿಸಲಾಯಿತು.
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಆಯ್ಕೆ ಸಮಿತಿಯ ಅಧ್ಯಕ್ಷ ಸಂದೀಪ್ ಪಾಟೀಲ್ ಸಂದರ್ಶನಕ್ಕೆ ಹಾಜರಾಗಿರಲಿಲ್ಲ. ವಿದೇಶಿ ಆಕಾಂಕ್ಷಿಗಳ ಪೈಕಿ ಆಸ್ಟ್ರೇಲಿಯದ ಮಾಜಿ ಆಟಗಾರರಾದ ಸ್ಟುವರ್ಟ್‌ಲಾ ಹಾಗೂ ಟಾಮ್ ಮೂಡಿ ಟೆಲಿಕಾನ್ಫರೆನ್ಸ್ ಮೂಲಕ ಸಂದರ್ಶನದಲ್ಲಿ ಭಾಗಿಯಾದರು.
ಬಿಸಿಸಿಐ ಕೋಚ್ ಹುದ್ದೆಗಾಗಿ ತನ್ನ ವೆಬ್‌ಸೈಟ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿತ್ತು. ಭಾರತ ಹಾಗೂ ಹೊರದೇಶಗಳಿಂದ ಸುಮಾರು 57 ಅರ್ಜಿಗಳಿಂದ ಬಂದಿದ್ದವು. ಈ ಪೈಕಿ ಅಂತಿಮ ಪಟ್ಟಿಯಲಿ 21 ಅರ್ಜಿಗಳಿದ್ದವು.
ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯು ಜೂ.22 ರಂದು ತನ್ನ ಶಿಫಾರಸು ಪತ್ರವನ್ನು ಬಿಸಿಸಿಐ ಅಧ್ಯಕ್ಷರಿಗೆ ಕಳುಹಿಸಿಕೊಡುವ ಸಾಧ್ಯತೆಯಿದೆ.
ಬಿಸಿಸಿಐ ಜೂ.24 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆಯಿದೆ. ‘‘ನಾವು ಇನ್ನಷ್ಟು ಅಭ್ಯರ್ಥಿಗಳನ್ನು ಸಂದರ್ಶನ ಮಾಡುವುದಿಲ್ಲ. ಈ ಪ್ರಕ್ರಿಯೆ ಇವತ್ತಿಗೆ ಮುಕ್ತಾಯವಾಗಿದೆ. ನಾವು ಸುಮಾರು 10 ಅಭ್ಯರ್ಥಿಗಳನ್ನು ಸಂದರ್ಶನ ಮಾಡಿದ್ದೇವೆ. ಪ್ರತಿಯೊಬ್ಬರೂ ಹಾಜರಾಗಿದ್ದಾರೆ. ನಾವು ಇಂದು ಅಭ್ಯರ್ಥಿಯನ್ನು ಆಯ್ಕೆ ಮಾಡಿ ಬಿಸಿಸಿಐ ಕಾರ್ಯದರ್ಶಿಗೆ ನಮ್ಮ ವರದಿಯನ್ನು ನೀಡಲಿದ್ದೇವೆ ಎಂದು ಗಂಗುಲಿ ನುಡಿದರು.
ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ಹೆಸರು ಶಿಫಾರಸು?
ಮಾಜಿ ಆಟಗಾರರಾದ ಸೌರವ್ ಗಂಗುಲಿ, ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯು ಭಾರತದ ಮಾಜಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಹೆಸರನ್ನು ಟೀಮ್ ಇಂಡಿಯಾದ ಕೋಚ್ ಹುದ್ದೆಗೆ ಶಿಫಾರಸು ಮಾಡಲಿದೆ ಎನ್ನಲಾಗಿದೆ.
ಕುಂಬ್ಳೆ ಭಾರತದ ಪರ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 956 ವಿಕೆಟ್‌ಗಳನ್ನು ಪಡೆದಿದ್ದಾರೆ. ಶಾಸ್ತ್ರಿ 18 ತಿಂಗಳ ಕಾಲ ಭಾರತ ತಂಡದ ನಿರ್ದೇಶಕರಾಗಿದ್ದು, ಇವರ ಮಾರ್ಗದರ್ಶನದಲ್ಲಿ ಭಾರತ ಏಕದಿನ ವಿಶ್ವಕಪ್‌ನಲ್ಲಿ ಹಾಗೂ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ತಲುಪಿತ್ತು.
ಜೂ.24ರಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಕೋಚ್ ಹೆಸರು ಬಹಿರಂಗವಾಗಲಿದೆ.







