ಯುರೋ ಕಪ್ ಬಳಿಕ ನಿವೃತ್ತಿ: ಇಬ್ರಾಹಿಮೊವಿಕ್

ನೈಸ್(ಪ್ಯಾರಿಸ್), ಜೂ.21: ಯುರೋ ಕಪ್‌ನ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾಗುತ್ತೇನೆ ಎಂದು ಸ್ವೀಡನ್‌ನ ಸ್ಟಾರ್ ಸ್ಟ್ರೈಕರ್ ಝ್ಲಾಟನ್ ಇಬ್ರಾಹಿಮೊವಿಕ್ ಮಂಗಳವಾರ ಹೇಳಿದ್ದಾರೆ.
‘‘ಯುರೋ ಕಪ್‌ನಲ್ಲಿ ಸ್ವೀಡನ್ ಆಡಲಿರುವ ಕೊನೆಯ ಪಂದ್ಯ ನನ್ನ ಪಾಲಿಗೂ ಕೊನೆಯ ಪಂದ್ಯ ಆಗಲಿದೆ. ಅದು ನಾಳೆಯೇ ಬಾರದಿರಲಿ ಎಂದು ಆಶಿಸುತ್ತೇನೆ. ನಾನು ಈ ತನಕ ಆಟಗಾರ ಹಾಗೂ ನಾಯಕನಾಗಿ ಮಾಡಿರುವ ಸಾಧನೆಗೆ ಹೆಮ್ಮೆಯಾಗುತ್ತಿದೆ. ನನಗೆ ಬೆಂಬಲ ನೀಡಿರುವ ಪ್ರತಿಯೋರ್ವರಿಗೂ ಕೃತಜ್ಞತೆ ಸಲ್ಲಿಸಲು ಬಯಸುವೆ. ಏಕೆಂದರೆ ಅವರಿಂದಾಗಿಯೇ ನಾನು ಇಲ್ಲಿ ತನಕ ತಲುಪಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಸ್ವೀಡನ್‌ನ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದರೂ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಾರೆ’’ ಎಂದು ಇಬ್ರಾಹಿಮೊವಿಕ್ ಹೇಳಿದ್ದಾರೆ.
ಸ್ವೀಡನ್ ತಂಡ ಬುಧವಾರ ಬೆಲ್ಜಿಯಂ ವಿರುದ್ಧ ‘ಇ’ ಗುಂಪಿನಲ್ಲಿ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಸ್ವೀಡನ್‌ಗೆ ಯುರೋ ಕಪ್‌ನಲ್ಲಿ ಅಂತಿಮ 16ರ ಹಂತಕ್ಕೆ ಅರ್ಹತೆ ಪಡೆಯಬೇಕಾದರೆ ಬೆಲ್ಜಿಯಂ ವಿರುದ್ಧ ಗೆಲ್ಲಲೇಬೇಕಾಗಿದೆ. ಒಂದು ವೇಳೆ ಸೋತರೆ ಇಬ್ರಾಹಿಮೊವಿಕ್‌ಗೆ ಇದು ಕೊನೆಯ ಪಂದ್ಯವಾಗಲಿದೆ. ಸ್ವೀಡನ್ ಪರ 116 ಪಂದ್ಯಗಳನ್ನು ಆಡಿರುವ ಇಬ್ರಾಹಿಮೊವಿಕ್ ಒಟ್ಟು 62 ಗೋಲುಗಳನ್ನು ಬಾರಿಸಿ ತನ್ನ ದೇಶದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.





