ಬೆಂಗಳೂರು: ಶಿವಾಜಿನಗರದಲ್ಲಿ ಗುಂಡಿನ ದಾಳಿಗೆ ಹಳೇ ರೌಡಿ ಬಲಿ
.jpg)
ಬೆಂಗಳೂರು, ಜೂ. 21: ರೌಡಿಶೀಟರ್ ಎಂದು ಗುರುತಿಸಿಕೊಂಡಿದ್ದ ಪರ್ವೀಝ್ ಎಂಬಾತನನ್ನು ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಶಿವಾಜಿನಗರ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗಳವಾರ ಶಿವಾಜಿನಗರದ ಬಳಿ ಇಫ್ತಾರ್‌ಕೂಟ ಮುಗಿಸಿ ಬರುವಾಗ ರಾತ್ರಿ 8:55ರ ವೇಳೆಗೆ ಹಳೇ ರೌಡಿ ಎಂದು ಗುರುತಿಸಿಕೊಂಡಿದ್ದ ಪರ್ವೀಝ್(50) ಎಂಬಾತನ ಮೇಲೆ ಬೈಕ್‌ಗಳಲ್ಲಿ ಬಂದ ಮೂವರು ಯುವಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ಗಾಯಗೊಂಡ ಪರ್ವೀಝ್‌ನನ್ನು ಹತ್ತಿರದ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೆ, ವಾಜೀದ್(25), ಆಶಿಫ್(25) ಎಂಬವರು ದಾಳಿಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಆರೋಪಿಗಳನ್ನು ಶಬ್ಬೀರ್, ಝಮೀರ್ ಎಂದು ಹೇಳಲಾಗುತ್ತಿದ್ದು, ಇವರ ವಿರುದ್ಧ ಯಶವಂತಪುರ, ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆರೋಪದ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಶಿವಾಜಿನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





