ಜನಾಂಗ, ಧರ್ಮವನ್ನು ಮೀರಿ ಏಕತೆಯಿಂದಿರಿ
ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಬಾನ್ ಕಿ ಮೂನ್ ಸಂದೇಶ

ವಿಶ್ವಸಂಸ್ಥೆ, ಜೂ. 21: ಸಾಮರಸ್ಯ ಮತ್ತು ಏಕತೆಯನ್ನು ಬೋಧಿಸುವ ಯೋಗದ ಸಂದೇಶವನ್ನು ಪಾಲಿಸುವಂತೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಜಗತ್ತಿನ ದೇಶಗಳ ಜನರಿಗೆ ಕರೆ ನೀಡಿದ್ದಾರೆ. ಜನಾಂಗ, ಧರ್ಮ, ಲಿಂಗ ಮತ್ತು ಲೈಂಗಿಕತೆಗಳನ್ನು ಮೀರಿ ಒಗ್ಗಟ್ಟಿನಿಂದ ಇರುವಂತೆ ಅವರು ಮನವಿ ಮಾಡಿದ್ದಾರೆ.
‘‘ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ, ಆರೋಗ್ಯಕರ ಆಯ್ಕೆಗಳು ಮತ್ತು ಜೀವನವಿಧಾನಗಳನ್ನು ಅನುಸರಿಸುವಂತೆ ಹಾಗೂ ನಮ್ಮ ಸಹ ಮಾನವರೊಂದಿಗೆ ಒಗ್ಗಟ್ಟಿನಿಂದಿರುವಂತೆ ನಾನು ಪ್ರತಿಯೊಬ್ಬರನ್ನೂ ಒತ್ತಾಯಿಸುತ್ತೇನೆ. ಒಂದು ಮಾನವ ಕುಟುಂಬದ ಸದಸ್ಯರು ಒಂದು ಸಾಮಾನ್ಯ ಹಾಗೂ ಅಮೂಲ್ಯ ಮನೆಯನ್ನು ಹಂಚಿಕೊಳ್ಳುವಂತೆ ಈ ದಿನವನ್ನು- ಹಾಗೂ ಪ್ರತಿ ದಿನವನ್ನು- ನಾವು ಆಚರಿಸೋಣ’’ ಎಂದು ಎರಡನೆ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ ಮೂನ್ ಹೇಳಿದರು.
ಇಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಭಿನ್ನ ರಾಷ್ಟ್ರೀಯತೆ ಮತ್ತು ಲೈಂಗಿಕತೆಯ ಹೊರತಾಗಿಯೂ, ಮಾನವರ ನಡುವೆ ಸಮಾನತೆ ಇರಬೇಕು ಎಂದು ಅವರು ಪ್ರತಿಪಾದಿಸಿದರು. ಓರ್ಲಾಂಡೊದಲ್ಲಿ ಕಳೆದ ವಾರ ನಡೆದ ಸಾಮೂಹಿಕ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಜನರ ಲೈಂಗಿಕತೆಯೂ ಮಹತ್ವ ಪಡೆದುಕೊಳ್ಳುತ್ತದೆ ಎಂದರು. ಓರ್ಲಾಂಡೊದ ಪ್ರಸಿದ್ಧ ಸಲಿಂಗಿ ನೈಟ್‌ಕ್ಲಬ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ 49 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 50 ಮಂದಿ ಗಾಯಗೊಂಡಿದ್ದಾರೆ.
ಪ್ರಾಚೀನ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಕಸರತ್ತು ಯೋಗ ಭಾರತದಲ್ಲಿ ಹುಟ್ಟಿದೆ ಹಾಗೂ ಈಗ ಅದು ಜಗತ್ತಿನಾದ್ಯಂತ ವಿವಿಧ ರೂಪಗಳಲ್ಲಿ ಬಳಕೆಯಲ್ಲಿದೆ ಎಂದು ಬಾನ್ ನುಡಿದರು.







