ಚಾಂಪಿಯನ್ ಸ್ಪೇನ್‌ಗೆ ಕ್ರೊಯೇಷಿಯ ಶಾಕ್
ಯುರೋ ಚಾಂಪಿಯನ್‌ಶಿಪ್

ಪ್ಯಾರಿಸ್,ಜೂ.22: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಕ್ರೊಯೇಷಿಯ ತಂಡ ಯುರೋ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್ ಸ್ಪೇನ್ ತಂಡವನ್ನು 2--1 ಗೋಲುಗಳ ಅಂತರದಿಂದ ಮಣಿಸಿ ಶಾಕ್ ನೀಡಿತು.
ಯುರೋ ಚಾಂಪಿಯನ್‌ಶಿಪ್‌ನಲ್ಲಿ ಕಳೆದ 12 ವರ್ಷಗಳಿಂದ ಅಜೇಯ ದಾಖಲೆ ಕಾಯ್ದುಕೊಂಡಿದ್ದ ಸ್ಪೇನ್‌ನ ಗೆಲುವಿನ ಓಟಕ್ಕೆ ಕ್ರೊಯೇಷಿಯಾ ಕೊನೆಗೂ ಕಡಿವಾಣ ಹಾಕಿದೆ. 87ನೆ ನಿಮಿಷದಲ್ಲಿ ಗೆಲುವಿನ ಗೋಲು ಬಾರಿಸಿದ ಇವಾನ್ ಪೆರಿಸಿಕ್ ಕ್ರೊಯೇಷಿಯಾಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಯುರೋ ಚಾಂಪಿಯನ್‌ಶಿಪ್‌ನಲ್ಲಿ ಕಳೆದ ಎರಡು ಟೂರ್ನಿಗಳಲ್ಲಿ ಸತತ 15 ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಸ್ಪೇನ್ ಮುಖಭಂಗ ಅನುಭವಿಸಿತು.
ಸ್ಪೇನ್ ತಂಡ ಈ ಸೋಲಿನೊಂದಿಗೆ ‘ಡಿ’ ಗುಂಪಿನಲ್ಲಿ ಎರಡನೆ ಸ್ಥಾನಕ್ಕೆ ಕುಸಿದಿದೆ. ಈ ಪಂದ್ಯವನ್ನು ಡ್ರಾ ಸಾಧಿಸುತ್ತಿದ್ದರೆ ಡಿ ಗುಂಪಿನಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಳ್ಳಬಹುದಿತ್ತು.
ಉಭಯ ತಂಡಗಳು ಈಗಾಗಲೇ ನಾಕೌಟ್ ಸ್ಥಾನವನ್ನು ದೃಢಪಡಿಸಿವೆ. ಸ್ಪೇನ್ ತಂಡ ಸೋಮವಾರ ನಡೆಯಲಿರುವ ಅಂತಿಮ-16ರ ಸುತ್ತಿನಲ್ಲಿ ಇಟಲಿ ತಂಡವನ್ನು ಎದುರಿಸಲಿದೆ. ಕ್ರೊಯೇಷಿಯಾ ಶನಿವಾರ ಡಿ ಗುಂಪಿನಲ್ಲಿ ಮೂರನೆ ಸ್ಥಾನ ಪಡೆಯಲಿರುವ ತಂಡವನ್ನು ಎದುರಿಸಲಿದೆ.
ಯುರೋ ಕಪ್‌ನ ಅಂತಿಮ ಗ್ರೂಪ್ ಪಂದ್ಯದಲ್ಲಿ ಸ್ಪೇನ್‌ನ ಪರ ಸ್ಟ್ರೈಕರ್ ಅಲ್ವಾರೊ ಮೊರಾಟ 7ನೆ ನಿಮಿಷದಲ್ಲಿ ಗೆಲುವಿನ ಖಾತೆ ತೆರೆದರು. 45ನೆ ನಿಮಿಷದಲ್ಲಿ ಗೋಲು ಬಾರಿಸಿದ ನಿಕೊಲಾ ಕಾಲಿನಿಕ್ ಗೋಲನ್ನು 1-1 ರಿಂದ ಸರಿಗಟ್ಟಿದರು.
87ನೆ ನಿಮಿಷದಲ್ಲಿ ಸ್ಪೇನ್‌ನ ಗೋಲ್‌ಕೀಪರ್ ಡೇವಿಡ್ ಸಬಾಸಿಕ್‌ರನ್ನು ವಂಚಿಸಿದ ಪೆರಿಸಿಕ್ ಕ್ರೊಯೇಷಿಯಾದ ಪರ ಗೆಲುವಿನ ಗೋಲು ಬಾರಿಸಿದರು.
ಕ್ರೊಯೇಷಿಯಾದ ಸ್ಟಾರ್ ಮಿಡ್‌ಫೀಲ್ಡರ್ ಲೂಕಾ ಮಾಡ್ರಿಕ್ ಅನುಪಸ್ಥಿತಿಯಲ್ಲೂ ಉತ್ತಮ ಪ್ರದರ್ಶನ ನೀಡಿತು. 1994ರಲ್ಲಿ ವೆಲೆನ್ಸಿಯಾದಲ್ಲಿ ನಡೆದಿದ್ದ ಸೌಹಾರ್ದ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಕೊನೆಯ ಬಾರಿ ಮಣಿಸಿತ್ತು.







