ಅತ್ಯಾಚಾರ ಆರೋಪದಲ್ಲಿ ಬಂಧಿತ ಭಾರತೀಯ ಭಾರತ-ಝಿಂಬಾಬ್ವೆ ಪಂದ್ಯದ ಬಳಿಕ ಚೆಕ್ ವಿತರಿಸಿದ ಅತಿಥಿ !

ಹರಾರೆ, ಜೂ.22: ಅತ್ಯಾಚಾರ ಆರೋಪದ ಮೇಲೆ ಹರಾರೆ ಹೊಟೇಲೊಂದರಿಂದ ಕಳೆದ ವಾರ ಬಂಧಿತನಾಗಿದ್ದ ಭಾರತೀಯ ಕೃಷ್ಣ ಸತ್ಯನಾರಾಯಣ ಗಂಡ್ಲೂರು ಬಂಧನಕ್ಕೊಳಗಾಗುವ ಎರಡು ದಿನಗಳ ಮೊದಲು ಭಾರತ-ಝಿಂಬಾಬ್ವೆ ನಡುವೆ ನಡೆದ ಮೂರನೆ ಏಕ ದಿನ ಪಂದ್ಯದ ನಂತರದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಜಸ್ಪ್ರಿತ್ ಬುಮ್ರಾಗೆ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿಯನ್ನು ನೀಡಿದ್ದರು.
ಐಟೀಮ್ ವರ್ಕ್ಸ್‌ಗೆ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುವ ಸತ್ಯನಾರಾಯಣ ಭಾರತ ಝಿಂಬಾಬ್ವೆ ಸರಣಿಯ ಇನ್-ಸ್ಟೇಡಿಯಾ ರೈಟ್ಸ್ ಹೋಲ್ಡರ್ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೆನ್ನಲಾಗಿದೆ.
ಝಿಂಬಾಬ್ವೆ ಕ್ರಿಕೆಟ್ ಮಂಡಳಿ ಜೂನ್ 11 ರಂದು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಆತನನ್ನು ಐಟಿಡಬ್ಲ್ಯೂ ಸ್ಪೋರ್ಟ್ಸ್ ಇದರ ಸಹ ಸ್ಥಾಪಕನೆಂದು ಪರಿಚಯಿಸಲಾಗಿತ್ತು. ಸತ್ಯನಾರಾಯಣ ಜೊತೆ ಬಂಧಿತನಾಗಿರುವ ಇನ್ನೊಬ್ಬ ಭಾರತೀಯ ರವಿ ಕೃಷ್ಣನ್ ಝಾಂಬಿಯಾದಲ್ಲಿ ಉದ್ಯಮಿಯಾಗಿದ್ದಾರೆ.
ಮಂಗಳವಾರ ಅವರಿಬ್ಬರ ಜಾಮೀನು ಅರ್ಜಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಬಂದಿತ್ತಾದರೂ ಅವುಗಳನ್ನು ಹೈಕೋರ್ಟಿನಲ್ಲಿ ಸಲ್ಲಿಸುವಂತೆ ಹೇಳಲಾಗಿದ್ದು ನಾಳೆ ವಿಚಾರಣೆಗೆ ಬರುವ ಸಾಧ್ಯತೆಯಿದೆಯೆಂದು ಆರೋಪಿಗಳ ಅಟಾರ್ನಿ ಡಿಮಿಸನಿ ಮ್ತೋಂಬಿನಿ ಹೇಳಿದ್ದಾರೆ.
ಇಬ್ಬರು ಆರೋಪಿಗಳನ್ನೂ ಮೀಕ್ಲೆಸ್ ಹೋಟೆಲಿನಿಂದ ಕಳೆದ ಶುಕ್ರವಾರ ಬಂಧಿಸಲಾಗಿತ್ತು. ಎಂದು ಝಿಂಬಾಬ್ವೆ ರಿಪಬ್ಲಿಕ್ ಪೊಲೀಸ್ ಇಲಾಖೆಯ ಹಿರಿಯ ಅಸಿಸ್ಟೆಂಟ್ ಕಮಿಷನರ್ ದೃಢ ಪಡಿಸಿದ್ದಾರೆ.







