ಎರಡನೆ ಪತ್ನಿ ಹುಡುಕುವ ವೆಬ್‌ಸೈಟ್ ಪ್ರಾರಂಭಿಸಿದ ಮುಸ್ಲಿಂ ಉದ್ಯಮಿ
ಈಗಾಗಲೇ 35,000 ಸದಸ್ಯರು !

ಲಂಡನ್, ಜೂ.22: ಮುಸ್ಲಿಂ ಉದ್ಯಮಿಯೊಬ್ಬರು ಸೆಕೆಂಡ್ ವೈಫ್ ಡಾಟ್ ಕಾಂ ಎಂಬ ಹೆಸರಿನ ಡೇಟಿಂಗ್ ವೆಬ್‌ಸೈಟ್ ಆರಂಭಿಸಿದ್ದು ಪುರುಷರಿಗೆ ಎರಡನೇ ಪತ್ನಿಯರನ್ನು ಹುಡುಕಲು ಈ ಸೈಟ್ ಸಹಾಯ ಮಾಡುವುದು ಎಂದು ಹೇಳಲಾಗಿದೆ. ಈ ವೆಬ್ ಸೈಟ್ ಹಳೆ ಕಾಲದ ಮೌಲ್ಯಗಳು ಹಾಗೂ ನೀತಿಯನ್ನು ಎತ್ತಿ ಹಿಡಿಯುತ್ತದೆಯೆಂದು ಅದನ್ನು ಆರಂಭಿಸಿದ ಆಝಾದ್ ಚಾಯ್ ವಾಲಾ ಹೇಳುತ್ತಾರೆ.
ಈ 33 ವರ್ಷದ ಉದ್ಯಮಿಗೆ ತನ್ನ ವೆಬ್ ಸೈಟ್‌ಮೇಲೆ ಅದೆಷ್ಟು ನಂಬಿಕೆಯಿದೆಯೆಂದರೆ ಅದರ ಮುಖಾಂತರವೇ ತನ್ನ ಮುಂದಿನ ಎರಡು ಪತ್ನಿಯರನ್ನು ಆಯ್ಕೆ ಮಾಡುವ ಇರಾದೆ ಆತನದು. ಈ ಸೈಟಿಗೆ ಈಗಾಗಲೇ 35,000 ಸದಸ್ಯರಿದ್ದು ಲೀಕೆಸ್ಟರ್‌ನಂತಹ ಪ್ರದೇಶಗಳಲ್ಲಿ ಮುಸ್ಲಿಂ ಪುರುಷರಲ್ಲಿ ಅದು ಅಪಾರ ಜನಪ್ರಿಯತೆ ಪಡೆದಿದೆ. ಈ ವೆಬ್ ಸೈಟ್ ಲಿಂಕ್ ಒತ್ತಿದಾಗ ಕುರಾನ್ ಸಂದೇಶವೊಂದು ಕಾಣಿಸುತ್ತದೆ.
‘‘ನಿಮ್ಮ ಆಯ್ಕೆಯ ಮಹಿಳೆಯರನ್ನು ವಿವಾಹವಾಗಿ, ಎರಡು ಅಥವಾ, ಮೂರು ಅಥವಾ ನಾಲ್ಕು, ಆದರೆ ನೀವು ಎಲ್ಲರಿಗೂ ನ್ಯಾಯ ಒದಗಿಸಲು ಸಾಧ್ಯವಿಲ್ಲವೆಂದಾದರೆ, ಒಬ್ಬರು ಮಾತ್ರ ಸಾಕು.’’
ತನ್ನ ಮೊದಲ ವೆಬ್‌ಸೈಟಿನ ಯಶಸ್ಸಿನಿಂದ ಪ್ರಭಾವಿತನಾಗಿರುವ ಚಾಯ್ ವಾಲ ಈಗ ಪಾಶ್ಚಿಮಾತ್ಯ ದೇಶಗಳ ಎಲ್ಲಾ ಧರ್ಮಗಳ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪಾಲಿಗೆಮಿ ಡಾಟ್ ಕಾಂ ಎಂಬ ಇನ್ನೊಂದು ವೆಬ್ ಸೈಟನ್ನು ಆರಂಭಿಸಿದ್ದಾರೆ. ಈ ವೆಬ್ ಸೈಟ್ ಮುಖ್ಯವಾಗಿ ಮಹಿಳೆಯರಲ್ಲಿ ಜನಪ್ರಿಯವಾಗಿದ್ದು ಕಳೆದ ವರ್ಷ ಆರಂಭಗೊಂಡಂದಿನಿಂದ 7,000 ಸದಸ್ಯರನ್ನು ಹೊಂದಿದೆ.
‘ವೆಲ್ಕಂ ಟು ದಿ ವರ್ಲ್ಡ್ ಆಫ್ ಪಾಲಿಗೆಮಿ’ ಎಂಬ ಬ್ಯಾನರ್‌ನೊಂದಿಗೆ ತೆರೆದುಕೊಳ್ಳುವ ಈ ವೆಬ್ ಸೈಟ್‘‘ನಮಗೆ ದೊಡ್ಡದಾದ ಹಾಗೂ ಬಲಶಾಲಿಯಾದ ಕುಟುಂಬಗಳು ಬೇಕು’’ಎಂದು ಹೇಳುತ್ತದೆ.
ಬ್ರಿಟನ್‌ನಲ್ಲಿ ದ್ವಿಪತ್ನಿತ್ವ ಅಪರಾಧವಾಗಿದ್ದು ತಪ್ಪಿತಸ್ಥರಿಗೆ ಏಳು ವರ್ಷಗಳ ಜೈಲು ಶಿಕ್ಷೆಯಾಗಬಹುದು. ಆದರೆ ತನ್ನ ಧರ್ಮವು ನಾಲ್ಕು ಪತ್ನಿಯರನ್ನು ಹೊಂದಲು ಅನುಮತಿಸುವುದರಿಂದ ತಾನು ಯಾವುದೇ ಕ್ರಿಮಿನಲ್ ಚಟುವಟಿಕೆಯನ್ನು ಉತ್ತೇಜಿಸುತ್ತಿಲ್ಲ, ಎಂದು ಆತನ ವಾದವಾಗಿದೆ.
ಆದರೆ ಆತನ ವೆಬ್‌ಸೈಟ್ ಹಲವರ ವಿರೋಧ ಕೂಡ ಕಟ್ಟಿಕೊಂಡಿದೆ. ಪೆರ್ರಿ ಬಾರ್ ಸಂಸದ ಹಾಗೂ ಮುಸ್ಲಿಮರೂ ಆಗಿರುವ ಖಲೀದ್ ಮೆಹಮೂದ್ ಅವರು ಚಾಯ್ ವಾಲಾರ ವೆಬ್ ಸೈಟುಗಳನ್ನು ‘ಸ್ಟುಪಿಡ್’ ಎಂದು ಬಣ್ಣಿಸುತ್ತಾರೆ.







