ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿಗೆ ಕೊನೆಯಿಲ್ಲವೇ?
ಕುಂದಾಪುರದ ಭೀಕರ ದುರಂತದಲ್ಲೂ ವಿಕೃತಾನಂದ ಪಡೆದರು!

ಮಂಗಳೂರು, ಜೂ.22: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರ ವಿಕೃತ ವರ್ತನೆ ಬೆಚ್ಚಿ ಬೀಳಿಸುವಂತಿದೆ. ಭೀಕರ ಅಪಘಾತದಂತಹ ಸಂದರ್ಭದಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವಿಕೃತರು ತಮ್ಮ ವಿಕೃತ ಮನಸ್ಥಿತಿಯನ್ನು ತೋರ್ಪಡಿಸುತ್ತಿದ್ದು ಇವುಗಳ ಬಗ್ಗೆ ಅಸಹ್ಯ ಹುಟ್ಟುವಂತೆ ಮಾಡುತ್ತಿದ್ದಾರೆ. ಕುಂದಾಪುರದ ತ್ರಾಸಿಯಲ್ಲಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ 8 ಕಂದಮ್ಮಗಳು ಮೃತಪಟ್ಟ ಸಂದರ್ಭದಲ್ಲೂ ವಾಟ್ಸಾಪ್‌ನಲ್ಲಿ ಕೆಲ ವಿಕೃತ ಸಂದೇಶಗಳು ಹರಿದಾಡಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.
ಕುಂದಾಪುರದಲ್ಲಿ ನಡೆದ ಅಪಘಾತದಲ್ಲಿ 8 ಕಂದಮ್ಮಗಲು ಮೃತಪಟ್ಟಿದ್ದರು. ಘಟನಾ ಸ್ಥಳದಿಂದ ಗಾಯಾಳು ಪುಟಾಣಿಗಳನ್ನು ಆಸ್ಪತ್ರೆಗೆ ಶೀಘ್ರವೇ ಕರೆತರಲಾಯಿತಾದರೂ ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದರು. ಘಟನೆಯ ಬಗ್ಗೆ ತಿಳಿದ ಕೂಡಲೇ ಇಡೀ ಉಡುಪಿ ಜಿಲ್ಲೆ ದಿಗ್ಭ್ರಾಂತಗೊಂಡಿತ್ತು. ಜನರೆಲ್ಲರೂ ಪುಟಾಣಿಗಳನ್ನು ಕರೆತಂದಿದ್ದ ಆಸ್ಪತ್ರೆಗೆ ದೌಡಾಯಿಸಿದ್ದರು. ಈ ಸಂದರ್ಭ ಬಹುತೇಕರ ಮೊಬೈಲ್‌ಗೆ ವಾಟ್ಸಾಪ್‌ನಲ್ಲಿ ತುರ್ತಾಗಿ ರಕ್ತ ಬೇಕು ಎನ್ನುವ ಸಂದೇಶಗಳು ಬಂದಿವೆ. ಇತ್ತ ದುಃಖದ ಮಡುವಿನಲ್ಲಿದ್ದ ಜನರಿಗೆ ಈ ಸಂದೇಶಗಳನ್ನು ನಂಬಬೇಕೋ, ಬಿಡಬೇಕೋ, ನಿಜವಾಗಿಯೂ ರಕ್ತದ ಅವಶ್ಯಕತೆ ಇದೆಯೇ ಇತ್ಯಾದಿ ಸಂಶಯಗಳು ಕಾಡಿದ್ದು, ದುಃಖದ ನಡುವೆಯೂ ಕೆಲವರು ಇದನ್ನು ಫಾರ್ವರ್ಡ್ ಮಾಡಿದ್ದಾರೆ. ಕೆಲವರು ಕೂಡಲೇ ಈ ಸಂಖ್ಯೆಗಳಿಗೆ ಕರೆ ಮಾಡಿದ್ದು, ಅದು ಅಸ್ತಿತ್ವದಲ್ಲೇ ಇಲ್ಲದ ಸಂಖ್ಯೆಗಳು ಎಂಬುದನ್ನು ತಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೋ ಸಮಯದಲ್ಲಿ ನಡೆದ ಘಟನೆಗಳ ಫೋಟೊಗಳನ್ನು ಇನ್ಯಾವುದೋ ಘಟನೆಯ ಚಿತ್ರವೆಂದು ಹಾಕಿ, ಅಪಘಾತದ ಸ್ಥಳದ, ಗಾಯಾಳುಗಳ ಭೀಕರ ಫೋಟೊ, ವೀಡಿಯೊಗಳನ್ನು ಹಾಕುವುದು, ತುರ್ತಾಗಿ ರಕ್ತ ಬೇಕು ಎನ್ನುವ ಸುಳ್ಳು ಸಂದೇಶಗಳನ್ನು ಕಳುಹಿಸುವ ವಿಕೃತ ಪ್ರವೃತ್ತಿ ಮುಂದುವರೆಯುತ್ತಲೇ ಇದೆ. ಇಂತಹ ಸಂದೇಶಗಳಿಂದಾಗಿ ಇದೀಗ ನಿಜವಾಗಿಯೂ ರಕ್ತದ ಅವಶ್ಯಕತೆ ಇರುವವರು ಕಳುಹಿಸಿದ ಸಂದೇಶಗಳನ್ನೂ ನಂಬಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ವಾಟ್ಸಾಪ್, ಫೇಸ್‌ಬುಕ್ ಅದೆಷ್ಟೋ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡಿ ಬಲಿತೆಗೆದುಕೊಂಡಿವೆ. ಆದರೂ ಇಂತಹ ವಿಚಿತ್ರ ಕೃತ್ಯಗಳಿಗೆ ಕಡಿವಾಣ ಬಿದ್ದಿಲ್ಲ. ಇಂತಹ ಹೃದಯವಿದ್ರಾವಕ ದುರಂತ ಸಂಭವಿಸಿದ ಸಂದರ್ಭದಲ್ಲೂ ವಿಕೃತರ ಮನಸ್ಸು ಕರಗುವುದಿಲ್ಲವೆಂದಾದರೆ ಬಹುಶಃ ಇದನ್ನು ಕಳುಹಿಸುವವರ ಮನುಷ್ಯತ್ವಕ್ಕೆ ಏನನ್ನಬೇಕು ಎಂಬ ಆಕ್ರೋಶ ಪ್ರಜ್ಞಾವಂತ ನಾಗರಿಕೆರಿಂದ ವ್ಯಕ್ತವಾಗುತ್ತಿದೆ. ಕನಿಷ್ಠ ಇಂತಹ ಸಂದರ್ಭದಲ್ಲಾದರೂ ವಿಕೃತರು ತಮ್ಮ ಬುದ್ಧಿಯನ್ನು ಬಿಡಲಿ ಎಂಬುದು ಸಹೃದಯರ ಆಶಯವಾಗಿದೆ.







