ತ್ರಾಸಿ ದುರಂತದ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಸಚಿವ ಪ್ರಮೋದ್ ಮಧ್ವರಾಜ್
.jpg)
ಉಡುಪಿ, ಜೂ.22: ಕುಂದಾಪುರ ತ್ರಾಸಿಯ ಮೊವಾಡಿ ಕ್ರಾಸ್ ಬಳಿ ನಿನ್ನೆ ನಡೆದ ಅಪಘಾತದಲ್ಲಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ನೂತನ ಮೀನುಗಾರಿಕಾ ಹಾಗೂ ಯುವ ಜನ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಬುಧವಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಇಂದು ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಚಿವರು ಅಲ್ಲಿಂದ ನೇರ ಮಣಿಪಾಲ ಆಸ್ಪತ್ರೆಗೆ ಆಗಮಿಸಿದರು. ಮಧ್ಯಾಹ್ನ 12.10ರ ಸುಮಾರಿಗೆ ಆಸ್ಪತ್ರೆಯ ಐಸಿಯುಗೆ ತೆರಳಿ ಚಿಕಿತ್ಸೆ ಪಡೆ ಯುತ್ತಿರುವ ಮಕ್ಕಳನ್ನು ಭೇಟಿ ಮನೆಯವರಿಗೆ ಸಾಂತ್ವಾನ ಹೇಳಿದರು.
ಮಣಿಪಾಲ ಆಸ್ಪತ್ರೆಯಲ್ಲಿ ಒಟ್ಟು ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ಮೂವರು ಐಸಿಯು ನಲ್ಲಿ ಇದ್ದರೆ, ಇಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ. ಕಾರು ಚಾಲಕ ಮಾರ್ಟಿನ್ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಮೋದ್ ಮಧ್ವರಾಜ್, ಮೃತ ಹಾಗೂ ಗಾಯಾಳುಗಳ ಕುಟುಂಬಗಳಿಗೆ ಪರಿಹಾರ ಒದಗಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿ ಮುಂದಿನ ನಿರ್ಧಾರ ತೆಗೆ ದುಕೊಳ್ಳಲಾಗುವುದು. ಅದೇ ರೀತಿ ರಸ್ತೆ ಸುರಕ್ಷತೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನರಸಿಂಹಮೂರ್ತಿ, ಜನಾರ್ದನ ತೋನ್ಸೆ, ಸತೀಶ್ ಅಮೀನ್ ಪಡುಕೆರೆ, ಅಮೃತ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
ಹೆಮ್ಮಾಡಿ ಬಂದ್:
ಮೊವಾಡಿ ಕ್ರಾಸ್‌ನಲ್ಲಿ ನಡೆದ ಅಪಘಾತದಿಂದ ಮಡಿದ ಮಕ್ಕಳ ಗೌರವಾರ್ಥ ಇಂದು ಹೆಮ್ಮಾಡಿ ಪೇಟೆ ಬಂದ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಡೀ ಪರಿಸರ ಶೋಕ ಸಾಗರದಲ್ಲಿ ಮುಳುಗಿದ್ದು, ಬೆಳಗ್ಗೆಯಿಂದಲೇ ಅಂಗಡಿಯನ್ನು ತೆರೆಯದೆ ವ್ಯಾಪಾರಸ್ಥರು ಬಂದ್ ಆಚರಿಸಿದರು.
ಸಚಿವರ ಭೇಟಿ
ಅಪಘಾತದಿಂದ ಮೃತಪಟ್ಟ ಹಾಗೂ ಗಾಯಗೊಂಡವರ ಮನೆಗಳಿಗೆ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ ನೀಡಲಿರುವರು ಎಂದು ಮೂಲಗಳು ತಿಳಿಸಿವೆ.







