ಕೊಣಾಜೆ: ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

ಕೊಣಾಜೆ, ಜೂ.22: ಕ್ಲಪ್ತ ಸಮಯಕ್ಕೆ ನಿದ್ದೆ ಹಾಗೂ ನಿಯಮಿತ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಲು ಸಾಧ್ಯ. ಆದರೆ ಸಣ್ಣ ವಿಚಾರಗಳೆಂದು ಕಡೆಗಣಿಸುವ ಮೂಲಕ ಮಹಿಳೆಯರ ಆರೋಗ್ಯ ಹದಗೆಡುತ್ತದೆ. ಇಂದಿನ ಆಹಾರ ಪದ್ದತಿಯಿಂದ ಅನಾರೋಗ್ಯ ಸಮಸ್ಯೆ ಸಮಾನ್ಯವಾಗಿದೆ. ಸಮೀಕ್ಷೆಗಳ ಪ್ರಕಾರ ಶೇ.20ರಷ್ಟು ಮಕ್ಕಳಲ್ಲಿ ಬೊಜ್ಜಿನ ಕಾಯಿಲೆ ಇದ್ದು ಜಂಕ್ ಆಹಾರವೇ ಕಾರಣ ಎಂದು ಡಾ.ಶಿಲ್ಪಾಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧೀನದ ಅಸೈಗೋಳಿ ಶಬರಿ ಹಾಗೂ ಕೊಣಾಜೆ ಶಾರದಾ ಜ್ಞಾನ ವಿಕಾಸ ಕೇಂದ್ರಗಳ ಕೊಣಾಜೆ ಗ್ರಾಮ ಪಂಚಾಯತ್ ಸೇವಾ ಕೇಂದ್ರದಲ್ಲಿ ನಡೆದ ವಾರ್ಷಿಕ ಉತ್ಸವದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಹಣತೆ ಬೆಳೆಯಬೇಕಾದರೆ ಎಣ್ಣೆಯ ಅಗತ್ಯವಿರುವಂತೆ, ಒಂದು ಮನೆ ಬೆಳಗಬೇಕಾದರೆ ಮಹಿಳೆಯರು ಆರೋಗ್ಯವಂತರಾಗಿರುವುದು ಅಷ್ಟೇ ಅಗತ್ಯ ಎಂದು ಹೇಳಿದರು.
ಕೊಣಾಜೆ ಜನಜಾಗೃತಿ ಸಮಿತಿ ಸದಸ್ಯ ಶಂಕರಾನಂದ ಎನ್.ಇನವಳ್ಳಿ ಮಾತನಾಡಿ, ಅನ್ನಾಹಾರ ಸೇವನೆ ಸಂದರ್ಭ ಇಲ್ಲವೇ ಬಳಿಕ, ಬಾಯಾರಿಕೆ ನೀಗಿಸುವ ಸಲುವಾಗಿ ಹೆಚ್ಚಿನವರು ಪೆಪ್ಸಿ, ಕೋಲಾದಂತಹ ಕೃತಕ ಪಾನೀಯ ಸೇವಿಸುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ, ಅದರ ಬದಲು ಆಯುರ್ವೇದದಲ್ಲಿ ಸೂಚಿಸಲಾಗಿರುವ ಪಾನೀಯ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ. ಜ್ಞಾನ ವಿಕಾಸ ಕೇಂದ್ರದ ಸದಸ್ಯರಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯಿದ್ದರೆ ಮನೆಯಲ್ಲಿ ಜಾಗೃತಿ ಮೂಡಲು ಸಾಧ್ಯ ಎಂದರು.
ಅಸೈಗೋಳಿ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಚ್ಚುತ ಗಟ್ಟಿ ಹಾಗೂ ವಲಯ ಮೇಲ್ವಿಚಾರಕಿ ರೇಷ್ಮಾ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಚಂದ್ರಮೋಹಿನಿ ಸ್ವಾಗತಿಸಿದರು. ಅಸೈಗೋಳಿ ಸೇವಾಪ್ರತಿನಿಧಿ ಪೂರ್ಣಿಮಾ ವಂದಿಸಿದರು. ಕೊಣಾಜೆ ಸೇವಾಪ್ರತಿನಿಧಿ ನೌಷಾದ್ ಕಾರ್ಯಕ್ರಮ ನಿರೂಪಿಸಿದರು.







