ಕೇರಳ ಕ್ರೀಡಾ ಕೌನ್ಸಿಲ್ ಅಧ್ಯಕ್ಷ ಸ್ಥಾನಕ್ಕೆ ಅಂಜುಬಾಬ್ಬಿ ಜಾರ್ಜ್ ಗುಡ್‌ಬೈ

ಹೊಸದಿಲ್ಲಿ, ಜೂ.22: ಒಲಿಂಪಿಯನ್ ಅಂಜುಬಾಬ್ಬಿ ಜಾರ್ಜ್ ಬುಧವಾರ ಕೇರಳ ಕ್ರೀಡಾ ಕೌನ್ಸಿಲ್‌ನ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಿದ್ದಾರೆ. ರಾಜ್ಯ ಕ್ರೀಡಾಸಚಿವರು ತನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡಿರುವುದರಿಂದ ಕೆರಳಿರುವ ಅಂಜು ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ನೀವು ನಮ್ಮನ್ನು ಕೊಲ್ಲಬಹುದು ಆದರೆ ನಮ್ಮನ್ನು ಸೋಲಿಸಲು ನಿಮಗೆ ಸಾಧ್ಯವಿಲ್ಲ...ಕ್ರೀಡೆಯು ಯಾವುದೇ ಪಕ್ಷ ಇಲ್ಲವೇ ರಾಜಕೀಯಕ್ಕಿಂತ ಮಿಗಿಲಾದುದು ಎಂದು 2003ರಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎನಿಸಿಕೊಂಡಿದ್ದ ಅಂಜು ಜಾರ್ಜ್ ಹೇಳಿದ್ದಾರೆ.
ರಾಜ್ಯದ ನೂತನ ಕ್ರೀಡಾ ಸಚಿವರಾದ ಇ.ಪಿ. ಜಯರಾಜನ್ ತನ್ನನ್ನು ಭ್ರಷ್ಟಾಚಾರಿ ಎಂದು ಕರೆದಿದ್ದರು. ಅಧಿಕಾರ ಕಳೆದುಕೊಂಡಿರುವ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪಕ್ಷವನ್ನು ತಾನು ಬೆಂಬಲಿಸುತ್ತಿದ್ದೆ ಎಂದು ಅವರು ನನ್ನ ಮೇಲೆ ಆರೋಪಿಸಿದ್ದಾರೆ ಎಂದು ಕಳೆದ ತಿಂಗಳು ಅಂಜುಬಾಬ್ಬಿ ಜಾರ್ಜ್ ಹೇಳಿದ್ದರು.
‘‘ನಾನು ಕಳೆದ ಆರು ತಿಂಗಳಿಂದ ಕ್ರೀಡಾ ಕೌನ್ಸಿಲ್‌ನ ಅಧ್ಯಕ್ಷೆಯಾಗಿರುವೆ. ಕಳೆದ ಒಂದು ದಶಕದಿಂದ ಆಗಿರುವ ಕೌನ್ಸಿಲ್ ಚಟುವಟಿಕೆಯ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ’’ ಎಂದು ಅಂಜು ಹೇಳಿದ್ದಾರೆ.
ಉಮ್ಮನ್ ಚಾಂಡಿ ಸರಕಾರ ಕಳೆದ ವರ್ಷ ಅಂಜು ಬಾಬ್ಬಿ ಜಾರ್ಜ್‌ರನ್ನು ರಾಜ್ಯದ ಕ್ರೀಡಾ ಕೌನ್ಸಿಲ್‌ನ ಅಧ್ಯಕ್ಷೆಯಾಗಿ ನೇಮಕ ಮಾಡಿತ್ತು. ಮೇನಲ್ಲಿ ಎಲ್‌ಡಿಎಫ್ ಸರಕಾರ ಅಧಿಕಾರಕ್ಕೆ ಬಂದಿದ್ದಾಗ ಬಾಬ್ಬಿ ಜಾರ್ಜ್ ಸೌಜನ್ಯಕ್ಕಾಗಿ ನೂತನ ಕ್ರೀಡಾ ಸಚಿವರನ್ನು ಭೇಟಿಯಾಗಲು ತೆರಳಿದ್ದರು. ಆಗ ಅವರಿಗೆ ಕ್ರೀಡಾ ಸಚಿವರು ಭ್ರಷ್ಟಾಚಾರದ ಆರೋಪ ಹೊರಿಸಿ ಅವಮಾನಿಸಿದ್ದರು ಎನ್ನಲಾಗಿದೆ.
ನೀವು ಹಿಂದಿನ ಸರಕಾರದಿಂದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೀರಿ. ನೀವೀಗ ಬೇರೆ ಪಕ್ಷದ ಸದಸ್ಯರು. ನೀವು ಮಾಡಿರುವ ನೇಮಕ ಹಾಗೂ ವರ್ಗಾವಣೆ ಅಕ್ರಮ ಎಂದು ಕ್ರೀಡಾ ಸಚಿವರು ಸ್ಟಾರ್ ಅಥ್ಲೀಟ್‌ಗೆ ಹೇಳಿದ್ದರು ಎನ್ನಲಾಗಿದೆ.







