ಮರಳುಗಾರಿಕೆ ನಿಷೇಧ: ಪಾಲನೆಯಾಗದ ಜಿಲ್ಲಾಧಿಕಾರಿ ಆದೇಶ!
15 ದಿನಗಳೊಳಗೆ ವರದಿ ಸಲ್ಲಿಕೆಗೆ ಜಿಲ್ಲಾಧಿಕಾರಿ ನಿರ್ದೇಶನ

ಮಂಗಳೂರು, ಜೂ.22: ದ.ಕ. ಜಿಲ್ಲೆಯಾದ್ಯಂತ ಅಕ್ರಮ ಮರಳುಗಾರಿಕೆಯ ನಿಯಂತ್ರಣಕ್ಕೆ ಕಠಿಣ ಹೆಜ್ಜೆಗೆ ಮುಂದಾಗಿರುವ ಜಿಲ್ಲಾಡಳಿತ, ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಸಾಂಪ್ರದಾಯಿಕ ಮರಳುಗಾರಿಕೆಗೆ ಒತ್ತು ನೀಡಲು ಚಿಂತನೆ ನಡೆಸಿದೆ.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅಧ್ಯಕ್ಷತೆಯಲ್ಲಿ ಇಂದು ಮರಳುಗಾರಿಕೆಯಲ್ಲಿ ತೊಡಗಿರುವ ಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ, ಜಿಲ್ಲೆಯಲ್ಲಿ ನಿಷೇಧಿತ ಅವಧಿಯ ಬಳಿಕ ಮರಳುಗಾರಿಕೆ ನಡೆಸುವ ಸಂದರ್ಭ ಸಾಂಪ್ರದಾಯಿಕ ಕ್ರಮಗಳಿಗೆ ಒತ್ತು ನೀಡುವ ಕುರಿತಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ನೇತೃತ್ವದಲ್ಲಿ ಏಳು ಮಂದಿಯ ಸಮಿತಿ ರಚಿಸಲು ನಿರ್ಧರಿಸಲಾಯಿತು.
ಜಿಲ್ಲಾಧಿಕಾರಿ ಹೆಚ್ಚುವರಿ ಜಿಲ್ಲಾಧಿಕಾರಿ, ಡಿಸಿಪಿ (ಸಂಚಾರ ಮತ್ತು ಸುವ್ಯವಸ್ಥೆ), ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಹಾಗೂ ಮರಳು ಗುತ್ತಿಗೆದಾರರ ಮೂವರು ಸದಸ್ಯರನ್ನೊಳಗೊಂಡ 7 ಮಂದಿಯ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು 15 ದಿನಗಳಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಸಂಬಂಧಿಸಿ ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ನೀಡುವಂತೆ ಸಮಿತಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಸಭೆಯ ಆರಂಭದಲ್ಲಿ, ಜೂ.15ರಿಂದ ಎರಡು ತಿಂಗಳ ಅವಧಿಗೆ ಮರಳುಗಾರಿಕೆಯನ್ನು ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿರುವುದಲ್ಲದೆ, ಮರಳುಗಾರಿಕೆ ವ್ಯಾಪ್ತಿಯ ಮರಳು ಬೋಟ್‌ಗಳನ್ನು ನೀರು ಹಾಗೂ ದಡದಿಂದ ತೆರವುಗೊಳಿಸುವುದು, ತಾತ್ಕಾಲಿಕ ಶೆಡ್‌ಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದ್ದರೂ ಇನ್ನೂ ಸಮರ್ಪಕ ಕ್ರಮಗಳನ್ನು ಕೈಗೊಳ್ಳದಿರುವ ಬಗ್ಗೆ ಸಭೆಯಲ್ಲಿ ಜಿಲ್ಲಾಧಿಕಾರಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವ್ಯಾಹತ ಮರಳುಗಾರಿಕೆಯಿಂದಾಗಿ ಈಗಾಗಲೇ ನದಿ ದಡಗಳು ಕುರೂಪಗೊಂಡಿದ್ದು, ನಿಷೇಧಿತ ಅವಧಿಯಲ್ಲಿ ಆ ಪ್ರದೇಶಗಳಲ್ಲಿ ಯಥಾಸ್ಥಿತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕೋರಿದಾಗ, ಕಣ್ಣೂರು, ಮರವೂರು, ಕುಂಜತ್ತಬೈಲ್ ಮೊದಲಾದ ಪ್ರದೇಶಗಳಲ್ಲಿ ಪ್ರದೇಶವನ್ನು ತಾವೇ ಸ್ವಚ್ಛಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದರು.
ದ.ಕ. ಮರಳು ಗುತ್ತಿಗೆದಾರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಮಯೂರ್ ಉಳ್ಳಾಲ್ ಪ್ರತಿಕ್ರಿಯಿಸುತ್ತಾ, ಜಿಲ್ಲಾಡಳಿತದ ಆದೇಶವನ್ನು ಪ್ರಾಮಾಣಿಕವಾಗಿ ಪಾಲಿಸಿದ್ದೇವೆ. ಆದರೆ ಅಧಿಕಾರಿಗಳು ನಿಷೇಧಿತ ದಿನಾಂಕದ ಹಿಂದಿನ ದಿನವೇ ದಾಳಿ ಮಾಡಿ ಇದ್ದ ಶೆಡ್‌ಗಳನ್ನೆಲ್ಲಾ ಕೆಡವಿದ್ದಾರೆ. ಅದೂ ತಮಗೆ ಬೇಕಾದಂತೆ ಕೆಲವು ಕಡೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ, ಕೆಲವು ಕಡೆ ಮಾತ್ರ ತಾವು ಕಾರ್ಯ ನಿರ್ವಹಿಸಿರುವಂತೆ ತೋರಿಸಿದ್ದಾರೆ ಎಂದು ಆಪಾದಿಸಿದರು.
ಜೂ.15ರಿಂದ ಮರಳುಗಾರಿಕೆ ನಿಷೇಧಿಸಲಾಗಿದ್ದರೂ ಯಾವ ಹಂತದಲ್ಲೂ ಕಾನೂನು ಪರಿಪಾಲನೆ ಆಗಿಲ್ಲ. ನಿಗದಿತ ಅವಧಿವರೆಗೂ ಮರಳುಗಾರಿಕೆ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಕಾಪಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ತಾತ್ಕಾಲಿಕ ಶೆಡ್‌ಗಳನ್ನು ತೆರವುಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದಾಗ, ಕೆಲವೊಂದು ಸಣ್ಣ ಪುಟ್ಟ ಗೊಂದಲಗಳು ಆಗಿರಬಹುದು ಎಂದು ಮರಳು ಗುತ್ತಿಗೆದಾರರು ವಾದಿಸಲೆತ್ನಿಸಿದರು. ಈ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಇದು ಚಿಕ್ಕ ಗೊಂದಲವಲ್ಲ. ನದಿ ದಡದ ಪರಿಸರವನ್ನೇ ಏರುಪೇರಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಮ್ಮ ಜನರಿಂದಲೇ ಸಮಿತಿ ಮಾಡಿ ಈ ಬಗ್ಗೆ ಪ್ರಾಮಾಣಿಕವಾಗಿ ಪರಿಶೀಲನೆ ಮಾಡಿಸಿ ವರದಿ ನೀಡಿ ಎಂದು ಜಿಲ್ಲಾಧಿಕಾರಿ ಮರಳು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಮಾತ್ರವಲ್ಲದೆ, ಸಿಆರ್‌ಝೆಡ್ ಪ್ರದೇಶದಲ್ಲಿ ಈಗಿರುವ ತಾತ್ಕಾಲಿಕ ನಿಷೇಧ ಖಾಯಂ ಆಗುವ ಎಲ್ಲಾ ಲಕ್ಷಣಗಳೂ ಇವೆ. ಹಾಗಾಗಿ ಕೇವಲ ಸಾಂಪ್ರದಾಯಿಕ ಪರವಾನಿಗೆದಾರರಿಗೆ ಮಾತ್ರವೇ ಸ್ಟಾಕ್‌ಯಾರ್ಡ್‌ಗೆ ಮರಳು ತಂದು ಸಂಗ್ರಹ ಮಾಡಲು ಮಾತ್ರವೇ ಅವಕಾಶ ನೀಡಿ, ಸಾಗಾಟಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇಂತಹ ವ್ಯವಸ್ಥೆಯಿಂದ ಮರಳುಗಾರಿಕೆಯನ್ನೇ ನಂಬಿರುವವರಿಗೆ ತೊಂದರೆಯಾಗಲಿದೆ. ಹಾಗಾಗಿ ನಮ್ಮ ಸದಸ್ಯರನ್ನೂ ಒಳಗೊಂಡ ಸಮಿತಿಯೊಂದನ್ನು ರಚಿಸಿ ಪರಿಶೀಲನೆ ನಡೆಸಿ ಕಾನೂನು ಬದ್ಧ ಮರಳುಗಾರಿಕೆಗೆ ಅವಕಾಶ ನೀಡುವಂತೆ ಮರಳು ಗುತ್ತಿಗೆದಾರ ಪ್ರತಿನಿಧಿಗಳು ಜಿಲ್ಲಾಧಿಕಾರಿಯನ್ನು ಮನವಿ ಮಾಡಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ, ಡಿಸಿಪಿ ಶಾಂತರಾಜು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಾಗೇಂದ್ರಪ್ಪ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಪುರಾಣಿಕ್ ಹಾಗೂ ಇತರ ಅಧಿಕಾರಿಗಳು, ಮರಳುಗುತ್ತಿಗೆದಾರ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಾಂಪ್ರದಾಯಿಕ ಮರಳುಗಾರಿಕೆ: ವಹಿಸಬೇಕಾದ ಕ್ರಮಗಳು
ಪಾರಂಪರಿಕವಾಗಿ ಮರಳುಗಾರಿಕೆ ನಡೆಸುವವರಿಗೆ ಮಾತ್ರವೇ ಅವಕಾಶ ನೀಡಿ ಮಾನವ ಶ್ರಮದ ಮೂಲಕ ಮರಳನ್ನು ತೆಗೆಯಲು ಅವಕಾಶ ಕಲ್ಪಿಸುವುದು. ಯಾವುದೇ ಕಾರಣಕ್ಕೂ ಮರಳನ್ನು ತೆಗೆಯಲು ಜೆಸಿಬಿ, ಹಿಟಾಚಿ, ಡೋಝರ್, ಕ್ರೇನ್ ಮೊದಲಾದ ಯಂತ್ರೋಪಕರಣಗಳನ್ನು ಬಳಸಿ ಮರಳುಗಾರಿಕೆ ಮಾಡುವುದಾಗಲಿ, ಲೋಡ್ ಮಾಡುವುದಾಗಲಿ ಮಾಡುವಂತಿಲ್ಲ.
ಪರವಾನಿಗೆದಾರರು ಮರಳನ್ನು ತೆಗೆಯುವುದು ಹಾಗೂ ಸಾಗಾಟ ಮಾಡಲು ಕೇವಲ 2 ವಾಹನಗಳನ್ನು ಬಳಸುವುದು ಹಾಗೂ ಬಳಸುವ ವಾಹನಗಳ ವಿವರ, ವಾಹನದ ನೋಂದಣಿ ಸಂಖ್ಯೆಯನ್ನು ಕಡ್ಡಾಯಗೊಳಿಸುವುದು, ಮರಳು ಸಾಗಾಟ ವಾಹನಕ್ಕೆ ಜಿಪಿಎಸ್ ವ್ಯವಸ್ಥೆ ಕಡ್ಡಾಯಗೊಳಿಸುವುದು, ಸಾಂಪ್ರದಾಯಿಕ ನಾಡ ದೋಣಿಗಳನ್ನು ಮಾತ್ರವೇ ಬಳಸುವುದು, ಈ ದೋಣಿಗಳಿಗೆ ಸಂಬಂಧಿಸಿದ ಇಲಾಖೆಯಿಂದ ನೋಂದಣಿ ಮಾಡಿಸಿಕೊಂಡ ವಿವರವನ್ನು ನೀಡಿದ ಬಳಿಕವೇ ಪರವಾನಿಗೆ ನೀಡುವುದು, ನೋಂದಣಿ ಸಂಖ್ಯೆ ಮತ್ತು ವಿವರವನ್ನು ಕೆಂಪು ಬಣ್ಣದಲ್ಲಿ ದೋಣಿಯ ಮೇಲೆ ಬರೆಸುವುದು, ಮರಳು ಸಾಗಾಟದ ದೋಣಿಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸುವುದು, ಮರಳು ಲೋಡ್ ಆದ ಸ್ಥಳದಿಂದ ಸರಬರಾಜು ಆಗುವವರೆಗೂ ನಿಯಮ ಹಾಗೂ ನಿಬಂಧನೆಗಳನ್ನು ಪಾಲಿಸುವುದು ಪರವಾನಿಗೆದಾರರ ಕರ್ತವ್ಯವಾಗಿರುತ್ತದೆ. ಈ ನಿಯಮಗಳ ಆಧಾರದಲ್ಲಿ ಸಮಿತಿಯ ಶಿಫಾರಸ್ಸುಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.
ನನಗೇ ಸವಾಲು ಹಾಕಿದ್ದಾರೆ: ಜಿಲ್ಲಾಧಿಕಾರಿ!
‘‘ಜಿಲ್ಲಾಡಳಿತ ಮರಳು ಗುತ್ತಿಗೆದಾರರಿಗೆ ಮುನ್ಸೂಚನೆ ನೀಡಿದ ಬಳಿಕವೂ, ನಿಷೇಧಿತ ಅವಧಿಯಲ್ಲಿ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿಯೂ ಏಕಾಏಕಿ ತಾತ್ಕಾಲಿಕ ಶೆಡ್‌ಗಳನ್ನು ತೆರವುಗೊಳಿಸಲಾಗಿಲ್ಲ. ಕಣ್ಣೂರಿನಲ್ಲಿ ನಾನು ಖುದ್ದು ಪರಿಶೀಲನೆಗೆ ಹೋಗಿದ್ದ ವೇಳೆ ನಿಮ್ಮ ಜೆಸಿಬಿ ಬಂದರೆ ಬೆಂಕಿ ಹಾಕುತ್ತೇವೆ ಎಂದು ನನ್ನೆದುರಲ್ಲೇ ಮರಳು ಗುತ್ತಿಗೆದಾರರೊಬ್ಬರು ಸವಾಲು ಹಾಕಿದ್ದಾರೆ’’ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.







