ಸುಳ್ಯದಲ್ಲಿ ಅಡಿಕೆ ತೆಂಗು ಬೆಳೆಗಾರರ ಸಭೆ
ಬೆಂಗಳೂರಿನಲ್ಲಿ ಜೂ.25ರಂದು ನಡೆಯುವ ಪ್ರತಿಭಟನೆಗೆ ಬೆಂಬಲ
ಸುಳ್ಯ, ಜೂ.22: ಅಡಿಕೆ, ತೆಂಗು ಬೆಳೆಗಾರರ ಸಭೆಯು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.
ರಾಜ್ಯ ರೈತ ಸಂಘ ಹಾಗೂ ಕಿಸಾನ್ ಸೇನೆಗಳ ಆಶ್ರಯದಲ್ಲಿ ಜೂ.25ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದ್ದು, ಅದರಲ್ಲಿ ಭಾಗವಹಿಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಮುಖಂಡರು ಮನವಿ ಮಾಡಿದರು. ರೈತ ಸಂಘ ಹಾಗೂ ಕಿಸಾನ್ ಸೇನೆಯ ಜಿಲ್ಲಾಧ್ಯಕ್ಷ ರವಿಕಿರಣ ಪುಣಚ ಮಾತನಾಡಿ, ಅಡಿಕೆ ಹಾಗೂ ತೆಂಗು ಬೆಳೆಗಾರರ ಸಮಸ್ಯೆಯನ್ನು ತೆರೆದಿಟ್ಟರು.
ಅಡಿಕೆ ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಜಿ.ಸತ್ಯನಾರಾಯಣ ಮಾತನಾಡಿ ಹೋರಾಟಕ್ಕೆ ಬೆಂಬಲ ಯಾಚಿಸಿದರು.
ಅಡಿಕೆ ಧಾರಣೆ ಕುಸಿತದ ಕುರಿತು ವ್ಯಾಪಕ ಚರ್ಚೆ ನಡೆಯಿತು. ಕ್ಯಾಂಪ್ಕೊ ಸಂಸ್ಥೆ ಧಾರಣೆ ಕುಸಿತಕ್ಕೆ ಕಾರಣ ಎಂದು ನೆಕ್ರಪ್ಪಾಡಿ ಕೃಷ್ಣಪ್ಪ ಗೌಡ ದೂರಿದರು. ಸರಕಾರದ ವಿರುದ್ಧ ಹೋರಾಟ ಮಾಡುವ ಬದಲು ಕ್ಯಾಂಪ್ಕೊದ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದವರು ಹೇಳಿದರು.
ಕಿಸಾನ್ ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿನೋದ್ ಪಾದೆಕಲ್ಲು, ರೈತ ಸಂಘದ ಸುಳ್ಯ ಘಟಕದ ದಿವಾಕರ ಪೈ, ಪುರುಷೋತ್ತಮ ನಂಗಾರು, ಬೆಳ್ಳಾರೆ ಸಿ.ಎ.ಬ್ಯಾಂಕ್ ನಿರ್ದೇಶಕ ಎ.ಕೆ.ನಾಯ್ಕಾ, ಪ್ರವೀಣ್ ಮುಂಡೋಡಿ ಮೊದಲಾದವರಿದ್ದರು.







