ಜ.1ರಂದು 1,500 ಕಿ.ಮೀ. ಉದ್ದದ ಹೆದ್ದಾರಿಗಳಲ್ಲಿ ಗಿಡಗಳನ್ನು ನೆಡಲು ಸರಕಾರ ಸಜ್ಜು: ಗಡ್ಕರಿ

ಹೊಸದಿಲ್ಲಿ,ಜೂ.22: ರಸ್ತೆ,ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ತನ್ನ ಹಸಿರು ಅಭಿಯಾನದ ಅಂಗವಾಗಿ ಜುಲೈ 1ರಂದು 1,500 ಕಿ.ಮೀ. ಹೆದ್ದಾರಿಗಳುದ್ದಕ್ಕೂ ಗಿಡಗಳನ್ನು ನೆಡಲಿದೆ.
ಸುಮಾರು ಐದು ಲಕ್ಷ ಕೋಟಿ ರೂ.ಗಳ ಯೋಜನೆಗಳ ಮೊತ್ತದ ಶೇ.1ರಷ್ಟನ್ನು ಗಿಡಗಳನ್ನು ನೆಡಲು ಮತ್ತು ಸ್ಥಳಾಂತರಗೊಳಿಸಲು ಮೀಸಲಿಡುವುದಾಗಿ ಸಚಿವಾಲಯವು ಈಗಾಗಲೇ ಪ್ರಕಟಿಸಿದ್ದು, 5,000 ಕೋ.ರೂ.ಗಳ ಉಪಕ್ರಮದ ಅಂಗವಾಗಿ ಜು.1ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮರಗಳನ್ನು ರಕ್ಷಿಸುವುದು ಮತ್ತು ನೆಡುವುದು ನಮ್ಮ ಪ್ರಯತ್ನವಾಗಿರಲಿದೆ. ರಸ್ತೆಗಳ ನಿರ್ಮಾಣಕ್ಕಾಗಿ ನಾವು ಮರಗಳನ್ನು ಕಡಿಯಬೇಕಾಗಿತ್ತು, ಆದರೆ ಮರಗಳನ್ನು ಕಡಿಯದಿರಲು ನಾವು ಪ್ರಯತ್ನಿಸಲಿದ್ದೇವೆ. ಮರಗಳ ಸ್ಥಳಾಂತರವನ್ನು ನಾವು ಉತ್ತೇಜಿಸಲಿದ್ದೇವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಇಲ್ಲಿ ತಿಳಿಸಿದರು.
ಈ ಅಭಿಯಾನದ ಅಂಗವಾಗಿ ಪಾರ್ಕಿಂಗ್ ಪ್ಲಾಝಾ ನಿರ್ಮಾಣಗೊಳ್ಳುತ್ತಿರುವ ತನ್ನ ಸಚಿವಾಲಯದ ಆವರಣದಲ್ಲಿರುವ ನಾಲ್ಕು ಮರಗಳನ್ನು ಹೆದ್ದಾರಿಯಲ್ಲಿ ಎಲ್ಲಾದರೂ ಸ್ಥಳಾಂತರಿಸಲಾಗುವುದು ಎಂದರು. 9 ಕೋ.ರೂ.ವೆಚ್ಚದ ಈ ಪಾರ್ಕಿಂಗ್ ಪ್ಲಾಝಾ ನಿರ್ಮಾಣದೊಂದಿಗೆ ಸಚಿವಾಲಯವು ಸ್ವಯಂಚಾಲಿತ ಬಹು ಅಂತಸ್ತುಗಳ ಕಾರು ನಿಲುಗಡೆ ಸೌಲಭ್ಯ ಹೊಂದಿರುವ ಮೊದಲ ಸರಕಾರಿ ಕಟ್ಟಡವಾಗಲಿದೆ. ಮರಗಳ ಸ್ಥಳಾಂತರ ಕಾರ್ಯವನ್ನು ಶೀಘ್ರವೇ ಬೃಹತ್ ಪ್ರಮಾಣದಲ್ಲಿ ಕೈಗೊಳ್ಳಬಹುದಾಗಿದೆ ಹಾಗೂ ಹೆದ್ದಾರಿ ನಿರ್ಮಾಣ ಮತ್ತು ಇತರ ನಿರ್ಮಾಣ ಚಟುವಟಿಕೆಗಳ ಸಂದರ್ಭ ಕೋಟ್ಯಂತರ ಮರಗಳನ್ನು ರಕ್ಷಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು.







