ಬೆಳೆ ವಿಮೆ ಪರಿಹಾರ ಹಣ ಬಿಡುಗಡೆಯಲ್ಲಿ ವಿಳಂಬ
ಗ್ರಾಮಸ್ಥರಿಂದ ಪ್ರತಿಭಟನೆ
ಶಿಕಾರಿಪುರ, ಜೂ.22: ಕೆರೆ ಕಟ್ಟೆ, ಬೋರ್‌ವೆಲ್ ಮತ್ತಿತರ ನೀರಿನ ಮೂಲವಿಲ್ಲದೆ ಕೇವಲ ಮಳೆಯಾಧಾರಿತ ಕೃಷಿಯನ್ನು ನಂಬಿ ಬದುಕುತ್ತಿರುವ ತಾಲೂಕಿನ ನರಸಾಪುರ,ಅಗ್ರಹಾರ ಮುಚುಡಿ, ತಾಳಗುಂದ ಗ್ರಾಮಗಳು ಬರಗಾಲದಿಂದ ತತ್ತರಿಸಿ ಸಂಪೂರ್ಣ ಬೆಳೆ ನಾಶವಾಗಿದ್ದು, ಈ ಬಗ್ಗೆ ಸೂಕ್ತ ರೀತಿಯಲ್ಲಿ ವರದಿ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ವಿಮಾ ಹಣ,ಪರಿಹಾರದಿಂದ ಗ್ರಾಮಸ್ಥರು ವಂಚಿತರಾಗಿದ್ದು, ಈ ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮದ ಜತೆಗೆ ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರು ಬುಧವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಆರಂಭದಲ್ಲಿ ಶಾಸಕ ರಾಘವೇಂದ್ರರ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ತಾಲೂಕಿನ 43 ಗ್ರಾಪಂ ವ್ಯಾಪ್ತಿಯ ರೈತರು ಮಾತನಾಡಿ, ಪ್ರಸಕ್ತ ಮುಂಗಾರಿನಲ್ಲಿ ಭತ್ತ, ಮೆಕ್ಕೆ ಜೋಳ ಮತ್ತಿತರ ಬೆಳೆಗೆ ವಿಮೆ ಹಣವನ್ನು ಪಾವತಿಸಿದ್ದು, ಇದೀಗ ಕೆಲವೇ ಗ್ರಾಪಂಗೆ ಮಾತ್ರ ಹಣ ಬಿಡುಗಡೆಯಾಗಿ ಅಗ್ರಹಾರ ಮುಚುಡಿ, ತಾಳಗುಂದ, ನರಸಾಪುರ ಜತೆಗೆ ಗೊಗ್ಗ, ಮಾರವಳ್ಳಿ,ತಡಗುಣಿ,ಚಿಕ್ಕಜಂಬೂರು,ಅಂಬಾರಗೊಪ್ಪ, ಮಂಚಿಕೊಪ್ಪ,ಅಂಜನಾಪುರ ಗ್ರಾಪಂ ವ್ಯಾಪ್ತಿಯ ಹಲವು ಹಳ್ಳಿಗಳಿಗೆ ವಿಮೆ ಹಣ ಬಿಡುಗಡೆಯಾಗಿಲ್ಲ ಎಂದು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ದಿಢೀರನೆ ಆಗಮಿಸಿದ ತಾಳಗುಂದ,ಅಗ್ರಹಾರ ಮುಚುಡಿ,ನರಸಾಪುರ ಗ್ರಾಮಗಳ ಆಕ್ರೋಶಭರಿತ ರೈತ ಸಮೂಹ ತಾಲೂಕು ಕಚೇರಿ ಮುಂಭಾಗ ಶಾಸಕರ ಜತೆ ಮಾತಿನ ಚಕಮಕಿ ನಡೆಸಿ, ತಾಲೂಕಿನ ಎಲ್ಲಾ ಆಗುಹೋಗುಗಳು ಶಾಸಕರ ಸಮ್ಮುಖದಲ್ಲಿ ನಿರ್ಣಯವಾಗಲಿದ್ದು, ನರಸಾಪುರ, ಅಗ್ರಹಾರ ಮುಚುಡಿ,ತಾಳಗುಂದ ಗ್ರಾಮಗಳು ಶಿಕಾರಿಪುರ ತಾಲೂಕಿನಿಂದ ಪ್ರತ್ಯೇಕವಾಗಿದೆಯೇ? ಗ್ರಾಮಕ್ಕೆ ಶಾಸಕರ ಸಹಿತ ಅಧಿಕಾರಿಗಳು ವಿಮಾ ಕಂಪೆನಿ ಪ್ರತಿನಿಧಿಗಳು ಭೇಟಿ ನೀಡಿದ್ದು, ಸೂಕ್ತ ವರದಿ ನೀಡದೆ ತಾರತಮ್ಯ ಎಸಗಲಾಗಿದೆ ಎಂದು ಶಾಸಕರ ಜತೆ ರೈತ ವರ್ಗ ತೀವ್ರ ವಾಗ್ವಾದ ನಡೆಸಿತು.
ಈ ಕೂಡಲೇ ತಪ್ಪಿತಸ್ಥ ತಹಶೀಲ್ದಾರ್,ಕೃಷಿ,ವಿಮಾ ಕಂಪೆನಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಸೂಕ್ತ ಸಮಜಾಯಿಷಿಗೆ ನೀಡುವ ವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ಶಾಸಕ ರಾಘವೇಂದ್ರ ಮಾತನಾಡಿ, ರೈತರ ವಿಚಾರದಲ್ಲಿ ರಾಜಕೀಯ ಮಾಡುವ ಹೀನ ಕೃತ್ಯಕ್ಕೆ ಇಳಿಯು ವುದಿಲ್ಲ. 3 ವರ್ಷದ ಹಿಂದೆ ತಾಲೂಕಿಗೆ ಬೆಳೆ ವಿಮೆ 35 ಕೋಟಿ ರೂ.ಬಿಡುಗಡೆಯಾಗಿದ್ದು,ಭೀಕರ ಬರಗಾಲದಿಂದ ತತ್ತರಿಸಿರುವ ಈ ಬಾರಿ ಕೇವಲ 7 ಕೋಟಿ ರೂ. ಬಿಡುಗಡೆಯಾಗಿದೆ. ಈ ಬಗ್ಗೆ ಸರ್ವ ರೀತಿಯ ಹೋರಾಟಕ್ಕೆ ಸಿದ್ಧ್ದವಿರುವುದಾಗಿ ಅವರು ಘೋಷಿಸಿದರು. ಬಿಸಿಲಹಳ್ಳಿ ಗ್ರಾಮದ ಶ್ರವಣಕುಮಾರ್ ಮಾತನಾಡಿ, ನೀರಾವರಿ ಸೌಲಭ್ಯದಿಂದ ವಂಚಿತವಾಗಿ ಕೇವಲ ಮಳೆಯಾಧಾರಿತ ಕೃಷಿಯನ್ನು ನಂಬಿರುವ ಗ್ರಾಮದ ರೈತರ ಬೆಳೆ ಈ ಬಾರಿ ಎಪಿಎಂಸಿ ತಲುಪಿದಲ್ಲಿ ವಿಮಾ ಹಣವನ್ನು ರೈತರು ಪಡೆಯುವುದಿಲ್ಲ ಎಂದು ಸವಾಲು ಹಾಕಿದರು. ಅಧಿಕಾರಿಗಳ ವರ್ತನೆ ಅನುಮಾನಾಸ್ಪದವಾಗಿದ್ದು, ತೋಟಗಾರಿಕೆ ಇಲಾಖೆಯ ರಂಗನಾಥ ಕೋಟ್ಯಂತರ ಆಸ್ತಿಯ ಒಡೆಯನಾಗಲು ಸಾಧ್ಯವಾಗಿದ್ದು ಹೇಗೆ ಎಂದು ಪ್ರಶ್ನಿಸಿದರು. ಶೀರೀಹಳ್ಳಿ ಗ್ರಾಮದ ಹಿರಿಯ ಸದಾಶಿವಪ್ಪಗೌಡ್ರು, ಅಧಿಕಾರಿಗಳು 3 ಗ್ರಾಮಗಳನ್ನು ಮರೆತಿದ್ದು, ಬೆಳೆವಿಮೆಗೆ ಅನುಸರಿಸುವ ಮಾನದಂಡವನ್ನು ವಿವರಿಸುವಂತೆ ಆಗ್ರಹಿಸಿದರು. ಪ್ರತಿ ವರ್ಷ ವಿಮಾಕಂತು ಪಾವತಿಸುತ್ತಿದು,್ದ ಈ ಬಾರಿ ಪರಿಹಾರವಿಲ್ಲ. ಕಂತು ಪಾವತಿ ಬೆಳೆನಾಶದಿಂದ ಅಸಾಧ್ಯ ಎಂಬಂತಾಗಿದೆ ರೈತರ ಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆವಿಮಾ ಪರಿಹಾರಕ್ಕೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಪರಮೇಶ್ವರಪ್ಪ, ಸದಸ್ಯ ಸುರೇಶನಾಯ್ಕ, ಮುಖಂಡ ಶಾಂತವೀರಪ್ಪಗೌಡ, ದಾನಿ ರುದ್ರಪ್ಪ, ಗುರುಮೂರ್ತಿ, ಬಿ.ಎಚ್ ನಾಗರಾಜಪ್ಪ, ಶಾಂತೇಶಪ್ಪ,ರಾಜಪ್ಪ,ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.







