ಸರಕಾರಿ ಶಾಲೆ ಉಳಿಸುವುದು ಸವಾಲಿನ ಕಾರ್ಯ: ಮಲ್ಲಿಕಾರ್ಜುನ ಹಕ್ರೆ
.jpg)
ಸಾಗರ, ಜೂ.22: ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ದಿನಮಾನದಲ್ಲಿ ಸರಕಾರಿ ಶಾಲೆಯನ್ನು ಉಳಿಸಿಕೊಳ್ಳುವುದನ್ನು ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಸವಾಲಾಗಿ ಸ್ವೀಕರಿಸಬೇಕು ಎಂದು ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು. ಇಲ್ಲಿನ ಸರಕಾರಿ ನೌಕರರ ಭವನದಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯಶಿಕ್ಷಕರನ್ನೊಳಗೊಂಡ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಶಾಲಾಭಿವೃದ್ಧಿ ಸಮಿತಿ ಶಿಕ್ಷಕರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳಬೇಕು. ಕೊಡುವ ಸಂಬಳಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಶಿಕ್ಷಕ ಸಮೂಹ ನಮ್ಮ ದೇಶದ ಆಸ್ತಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು. ಇದರಿಂದ ಅವರಲ್ಲಿ ಜ್ಞಾನಾ ರ್ಜನೆ ಮಾಡುವ ಬಗ್ಗೆ ಹೆಚ್ಚಿನ ಆಸಕ್ತಿ ಹುಟ್ಟುತ್ತದೆ. ಖಾಸಗಿ ಶಾಲೆಗಳು ಒಂದಲ್ಲೊಂದು ಕಾರಣದಿಂದ ಸರಕಾರಿ ಶಾಲೆಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಇದನ್ನು ಎದುರಿಸಬೇಕಾದರೆ ಶಾಲೆಯ ಶೈಕ್ಷಣಿಕ ವಾತಾ ವರಣ ಅಭಿವೃದ್ಧ್ದಿಪಡಿಸುವ ಬಗ್ಗೆ ಸಮೂಹ ಚಿಂತನೆ ಅಗತ್ಯ ಎಂದರು
. ಶಿಕ್ಷಣ ಸುಧಾರಣೆಯತ್ತ ಪಂಚಾಯತ್‌ರಾಜ್ ವ್ಯವಸ್ಥೆ ಘೋಷವಾಕ್ಯದಡಿ ತಾಲೂಕಿನ 179 ಶಾಲೆಗಳಲ್ಲೂ ಮುಖ್ಯಶಿಕ್ಷಕರು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರ ಜೊತೆ ಸಭೆ ನಡೆಸಿ, ಸ್ಥಳೀಯ ಸಮಸ್ಯೆ ನಿವಾರಣೆಗೆ ಒತ್ತು ಕೊಡುವ ಚಿಂತನೆ ನಡೆಸಲಾಗಿದೆ. ಶಿಕ್ಷಣದಲ್ಲಿ ಒಂದಷ್ಟು ಬದಲಾವಣೆ ತರದೆ ಹೋದಲ್ಲಿ ನಮ್ಮ ಮಕ್ಕಳು ಸ್ಪರ್ಧಾತ್ಮಕ ಯುಗವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವುದಿಲ್ಲ ಎಂದರು.
ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೆ ತಂದಿರುವ ಸರಕಾರ ಪ್ರತಿವರ್ಷ ಖಾಸಗಿ ಶಾಲೆಗಳಿಗೆ 300 ಕೋಟಿ ರೂ. ಪಾವತಿ ಮಾಡುತ್ತಿದೆ. ಇದು ಖಾಸಗಿ ಶಿಕ್ಷಣ ಸಂಸ್ಥೆಗೆ ಅನುಕೂಲವಾಗಿದೆ. ಗ್ರಾಮೀಣ ಭಾಗದ ಬಹುತೇಕ ಶಾಲೆಗಳಿಗೆ ಕೊಠಡಿ ಕೊರತೆ ಇದೆ. ಇದನ್ನು ಸರಕಾರ ಮನಗಾಣಬೇಕು. ಕಡ್ಡಾಯ ಶಿಕ್ಷಣ ನೀತಿ ಕಾಯ್ದೆ ತಿದ್ದುಪಡಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ ಎಂದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ಪ ಒ.ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ, ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಪಂಡಿತಾರಾಧ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಪ್ಪ ಹಾಲೇಶಪ್ಪ ಉಪಸ್ಥಿತರಿದ್ದರು.







