ಡಕೋಟಾ ಬಸ್‌ಗಳಿಂದ ತುಂಬಿರುವ ಮೂಡಿಗೆರೆ ಕೆಎಸ್ಸಾರ್ಟಿಸಿ ಘಟಕ

ಮೂಡಿಗೆರೆ, ಜೂ.22: ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಬಹುತೇಕ ಸಾರಿಗೆ ಬಸ್‌ಗಳ ಅವಧಿ ಮೀರಿದ್ದು, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಬಸ್‌ಗಳನ್ನು ತಳ್ಳಿ ಹತ್ತಬೇಕಾದ ಪರಿಸ್ಥಿತಿ ಎದುರಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಘಟಕ ಡಕೋಟಾ ಬಸ್‌ಗಳಿಂದ ತುಂಬಿದ್ದು, ಬಸ್‌ಗಳನ್ನು ಬದಲಿಸಿ ಅನುಕೂಲ ಕಲ್ಪಿಸದಿದ್ದರೆ ಮುಷ್ಕರ ನಡೆಸುವುದಾಗಿ ಕರವೇ ಬಿದರಹಳ್ಳಿ ಘಟಕದ ಕಾರ್ಯಕರ್ತರು ಪತ್ರಿಕಾ ಹೇಳಿಕೆ ಮೂಲಕ ಸಾರಿಗೆ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.
ಮಲೆನಾಡು ಪ್ರದೆ ೀಶವಾದ ಮೂಡಿಗೆರೆಯಲ್ಲಿ ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಗ್ರಾಮಾಂತರ ಪ್ರದೇಶದ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಶಾಲೆ ಬಿಟ್ಟ ನಂತರ ಮನೆ ಸೇರಲು ಬಸ್‌ಗಳನ್ನು ಹತ್ತಿದಾಗ ಬಸ್ಸು ಅರ್ಧದಲ್ಲೆ ಕೈಕೊಡುತ್ತಿದೆ. ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಬಸ್ಸಿನಿಂದ ಕೆಳಕ್ಕೆ ಇಳಿದು ಬಸ್ಸುಗಳನ್ನು ತಳ್ಳಿ ನಂತರ ಪ್ರಯಾಣಿಸಬೇಕಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಘಟಕ ವ್ಯವಸ್ಥಾಪಕರ ಗಮನಕ್ಕೆ ತಂದರೆ ಉಡಾಫೆ ಉತ್ತರ ನೀಡಿ ಜನಪ್ರತಿನಿಧಿಗಳನ್ನು ಕೇಳುವಂತೆ ತಿಳಿಸುತ್ತಿದ್ದಾರೆಯೇ ಹೊರತು ಬಸ್ಸಿನ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಮೂಡಿಗೆರೆ ಘಟಕದ ಬಸ್‌ಗಳಿಗೆ ವೇಗಮಿತಿ ಅಳವಡಿಸಿರುವ ಕಾರಣ ಗುಡ್ಡಗಾಡು ಪ್ರದೇಶಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ. ಗ್ರಾಮೀಣ ಪ್ರದೇಶದ ಬಸ್‌ಗಳ ಸೈಲೆನ್ಸರ್‌ಗಳಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಬಸ್ಸಿನ ಹಿಂಬದಿಯಲ್ಲಿ ಹೋಗಲು ಸಾಧ್ಯವಾಗದಂತಾಗಿದೆ ಎಂದು ದೂರಿದ್ದಾರೆ. ಸಮಯಕ್ಕೆ ಸರಿಯಾಗಿ ಬಸ್ಸ್‌ಗಳನ್ನು ಕೊಡದೆ ಮನಸ್ಸಿಗೆ ಬಂದಂತೆ ಬಸ್ಸುಗಳನ್ನು ನೀಡುತ್ತಿರುವ ಕಾರಣ ಸಂಸ್ಥೆ ನಷ್ಟದಲ್ಲಿ ನಡೆಯುತ್ತಿದೆ. ತಕ್ಷಣವೇ ಬಸ್‌ಗಳನ್ನು ದುರಸ್ತಿ ಪಡಿಸಿ ನೂತನ ಬಸ್ಸುಗಳನ್ನು ಗ್ರಾಮೀಣ ಪ್ರದೇಶಗಳಿಗೆ ಹಾಕಬೇಕು. ತಪ್ಪಿದಲ್ಲಿ ಘಟಕದ ಮುಂದೆ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸುವುದಾಗಿ ಕರವೇ ತಾಲೂಕು ಅಧ್ಯಕ್ಷ ಪ್ರಸನ್ನ ಗೌಡ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಹೇಮಾವತಿ, ಸದಸ್ಯರಾದ ಬಾಲಕೃಷ್ಣ, ಗಿರೀಶ್, ಪ್ರಶಾಂತ್, ಸೋಮ, ಶಂಕರೇಗೌಡ ಎಚ್ಚರಿಸಿದ್ದಾರೆ.







