ಕನ್ನಡ ದೇಶದ ಶ್ರೀಮಂತ ಭಾಷೆ: ಶ್ರೀನಿವಾಸ್

ತರೀಕೆರೆ, ಜೂ.22:ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯಲ್ಲಿ ಕಸಾಪ ಹೋಬಳಿ ಘಟಕದವತಿಯಿಂದ ಜ್ಞಾನಪೀಠ ಪುರಸ್ಕೃತರಿಗೆ ನುಡಿ ನಮನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕುವೆಂಪು ಬದುಕು ಬರಹ ಕಾರ್ಯಕ್ರಮಕ್ಕೆ ಶಾಸಕ ಜಿ.ಎಚ್.ಶ್ರೀನಿವಾಸ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕನ್ನಡ ಭಾಷೆ ದೇಶದ ಶ್ರೀಮಂತ ಭಾಷೆಯಲ್ಲಿ ಒಂದಾಗಿದ್ದು ಕನ್ನಡಕ್ಕೆ 8 ಜ್ಞ್ಞಾನಪೀಠ ಪ್ರಶಸ್ತಿ ಸಿಕ್ಕಿರುವುದೇ ಸಾಕ್ಷಿಯಾಗಿದೆ. ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ, ಸಾಹಿತ್ಯ ಮಾನವನ ಬದುಕಿಗೆ ಅರ್ಥ ಕಲ್ಪಿಸುತ್ತದೆ ಎಂದರು.
ಕುವೆಂಪು ಕೃತಿಗಳಲ್ಲಿ ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆ ಜೀವಂತವಾಗಿದೆ. ಕುವೆಂಪು ಕೃತಿಗಳು ಮೇಲ್ವರ್ಗಗಳಲ್ಲಿ ಸಂಚಲನ ಹಾಗೂ ಕೆಳ ವರ್ಗಗಳಲ್ಲಿ ಆತ್ಮಾಭಿಮಾನ ಮೂಡಿಸುತ್ತವೆ. ಕುವೆಂಪು ಕನ್ನಡದ ಮೊದಲ ಶೂದ್ರ ಹಾಗೂ ಸ್ತ್ರೀವಾದಿ ಲೇಖಕರಾಗಿದ್ದಾರೆ ಎಂದು ಉಪನ್ಯಾಸಕ ಸರ್ಜಾ ಶಂಕರ ಹರಳೀಮಠ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಉಪಪ್ರಾಚಾರ್ಯ ವಿ.ಪಿ ಸೋಮಶೇಖರಪ್ಪ, ಮಕ್ಕಳಿಗೆ ಜ್ಞಾನಾರ್ಜನೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ನಡೆಸಲು ಸಂಘ ಸಂಸ್ಥೆಯೊಂದಿಗೆ ಸಂತಸವಾಗುತ್ತದೆ. ಇಂತಹ ಅವಕಾಶ ನೀಡಿದ ಹೋಬಳಿ ಕಸಾಪ ಘಟಕಕ್ಕೆ ಆಭಾರಿಯಾಗಿದ್ದೇವೆ ಎಂದರು. ಹೋಬಳಿ ಕಸಾಪ ಘಟಕದ ಅಧ್ಯಕ್ಷ ತ.ಮ.ದೇವಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಮೊಗ್ಗ ಜಿಲ್ಲೆಯ ದಂಡಾವತಿ ಯೋಜನೆ ವಿರೋಧಿ ಹೋರಾಟ ಸಮಿತಿಯ ಮುಖಂಡ ವಾಮನಗೌಡ ,ತಾಲೂಕು ಕಸಾಪ ಅಧ್ಯಕ್ಷ ದಾದಾಪೀರ್, ಗೌರವ ಕಾರ್ಯದರ್ಶಿ ನವೀನ್ ಪೆನ್ನಯ್ಯ ,ಮುಖಂಡರಾದ ಕೋಶಾಧ್ಯಕ್ಷ ಟಿ.ಜಿ.ಸದಾನಂದ ಸೇರಿದಂತೆ ಮತ್ತಿತರರು ಇದ್ದರು.







