ಸರಕಾರಿ ನಿಯಮ ಗಾಳಿಗೆ ತೂರಿ ಶಾಲಾ ಮಕ್ಕಳ ಪ್ರಯಾಣ
ವಾಹನ ಸುರಕ್ಷತಾ ಸಮಿತಿ ರಚಿಸಲು ಮಂಡಳಿಗಳ ನಿರ್ಲಕ್ಷ್ಯ
ಶಿವಮೊಗ್ಗ, ಜೂ.22: ಕುಂದಾಪುರದಲ್ಲಿ ನಡೆದ ಶಾಲಾ ವಾಹನ ದುರಂತದ ಘಟನೆಯ ನಂತರ ಶಾಲಾ ವಾಹನಗಳ ಸುರಕ್ಷತೆಗೆ ಸಂಬಂಧಿಸಿದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದೆ. ಈ ನಡುವೆ ಶಾಲಾ ಮಕ್ಕಳನ್ನು ಕೊಂಡೊಯ್ಯುವ ವಾಹನಗಳ ಸುರಕ್ಷತೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಜಾರಿಗೊಳಿಸಿರುವ ನಿಯಮಾವಳಿಗಳ ಸಮರ್ಪಕ ಪಾಲನೆಯಾಗದಿರುವುದು ಬೆಳಕಿಗೆ ಬಂದಿದೆ. ಖಾಸಗಿ ಶಾಲೆಗಳು ಮಕ್ಕಳನ್ನು ಕೊಂಡೊಯ್ಯುವ ವಾಹನಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮೇಲ್ವಿಚಾರಣೆ ನಡೆಸಲು ಶಾಲಾ ವಾಹನ ಸುರಕ್ಷತಾ ಸಮಿತಿ ರಚನೆ ಮಾಡುವುದು ಕಡ್ಡಾಯವಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ರಾಜ್ಯ ಸರಕಾರ ಈ ಕುರಿತಂತೆ ಅಧಿಕೃತ ಆದೇಶ ಕೂಡ ಹೊರಡಿಸಿದೆ. ಆದರೆ ಇಲ್ಲಿಯವರೆಗೂ ಬಹುತೇಕ ಶಾಲೆಗಳು ಸಮಿತಿ ರಚನೆ ಮಾಡದೆ ನಿರ್ಲಕ್ಷ್ಯವಹಿಸಿವೆ. ಹಾಗೆಯೇ ಶಾಲಾ ವಾಹನಗಳ ವೇಗ ನಿಯಂತ್ರಣಕ್ಕೆ ಸ್ಪೀಡ್ ಗರ್ವನರ್ ಅಳವಡಿಕೆ ಹಾಗೂ ಸುರಕ್ಷತೆಯ ಉದ್ದೇಶದಿಂದ ವಾಹನಗಳಲ್ಲಿ ಜಿಪಿಎಸ್, ಸಿ.ಸಿ.ಕ್ಯಾಮರಾ ಹಾಕುವುದನ್ನು ಕೂಡ ಸರಕಾರ ಕಡ್ಡಾಯಗೊಳಿಸಿದೆ. ಈ ನಿಯಮಗಳ ಪಾಲನೆಯಲ್ಲಿಯೂ ಕೂಡ ಬಹುತೇಕ ಖಾಸಗಿ ಶಾಲೆಗಳು ನಿರ್ಲಕ್ಷ ಧೋರಣೆ ತಳೆದಿರುವುದು ಕಂಡುಬರುತ್ತಿದೆ. ಮಾಹಿತಿಯೇ ಇಲ್ಲ: ಬೇಕಾಬಿಟ್ಟಿಯಾಗಿ ವಾಹನ ಚಾಲನೆಗೆ ಕಡಿವಾಣ ಹಾಕಲು ಹಾಗೂ ಮಕ್ಕಳ ಸುರಕ್ಷತೆಯ ಉದ್ದೇಶದಿಂದ ೞಶಾಲಾ ವಾಹನ ಸುರಕ್ಷತಾ ಸಮಿತಿೞರಚನೆ ಮಾಡುವುದನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ. ಈ ಸಮಿತಿಯಲ್ಲಿ ಸ್ಥಳೀಯ ಪೊಲೀಸ್, ಶಿಕ್ಷಣ ಇಲಾಖೆ, ಆರ್‌ಟಿಒ, ಪೋಷಕರು ಹಾಗೂ ಸಂಬಂಧಿಸಿದ ಶಾಲಾ ಆಡಳಿತ ಮಂಡಳಿಯವರು ಸದಸ್ಯರಾಗಿರುತ್ತಾರೆ. ಮೂರ್ನಾಲ್ಕು ತಿಂಗಳಿಗೊಮ್ಮೆ ಈ ಸಮಿತಿಯು ಸಭೆ ಸೇರಬೇಕು. ಶಾಲಾ ವಾಹನಗಳ ಬಗ್ಗೆ ಲೋಪದೋಷ ಮತ್ತಿತರ ಅಂಶಗಳ ಬಗ್ಗೆ ಚರ್ಚೆ ನಡೆಸುವುದು ಕಡ್ಡಾಯವಾಗಿದೆ. ಆದರೆ ಅದೆಷ್ಟೋ ಶಾಲೆಗಳಿಗೆ ಈ ರೀತಿಯ ಸಮಿತಿ ರಚನೆ ಮಾಡಬೇಕು ಎಂಬುದರ ಮಾಹಿತಿಯೇ ಇಲ್ಲವಾಗಿದೆ. ಇದರಿಂದ ಖಾಸಗಿ ಶಾಲೆಗಳಲ್ಲಿ ಇಲ್ಲಿಯವರೆಗೂ ಈ ಸಮಿತಿಯೇ ಅಸ್ತಿತ್ವಕ್ಕೆ ಬಂದಿಲ್ಲವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಶಾಲಾ ವಾಹನಗಳಲ್ಲಿ ವೇಗ ನಿಯಂತ್ರಕ ಸ್ಪೀಡ್ ಗರ್ವನರ್‌ಗಳ ಅಳವಡಿಕೆ ಕೂಡ ಮಾಡಿಕೊಂಡಿಲ್ಲ. ಕ್ರಮ ಅನಿವಾರ್ಯ: ಪ್ರಾದೇಶಿಕ ರಸ್ತೆ ಸಾರಿಗೆ ಅಧಿಕಾರಿ (ಆರ್‌ಟಿಒ) ಶಿವರಾಜ್ ಪಾಟೀಲ್‌ರವರು ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ಮಕ್ಕಳನ್ನು ಕರೆದೊಯ್ಯಲು ವಾಹನ ವ್ಯವಸ್ಥೆ ಹೊಂದಿರುವ ಶಾಲೆಗಳು ಕಡ್ಡಾಯವಾಗಿ ವಾಹನ ಸುರಕ್ಷತಾ ಸಮಿತಿ ರಚನೆ ಮಾಡಬೇಕು. ನಿಯಮಿತವಾಗಿ ಸಭೆೆ ನಡೆಸಬೇಕು. ಇದಕ್ಕೆ ಸಂಬಂಧಿಸಿದ ವರದಿ ಸಿದ್ಧಪಡಿಸಬೇಕು. ಇದು ಸರಕಾರದ ಆದೇಶವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಿಯಮ ಉಲ್ಲಂಘಿಸುವ ಶಾಲೆಗಳಿಗೆ ನೋಟಿಸ್ ನೀಡಲಾಗುವುದು. ಹಾಗೆಯೇ ದಂಡನೀಯ ಕ್ರಮ ಜರಗಿಸಲಾಗುವುದು. ಇದಕ್ಕೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಅವಕಾಶ ಮಾಡಿಕೊಡಬಾರದು. ನಿಯಮಾನುಸಾರ ಸಮಿತಿ ರಚನೆ ಮಾಡಿ, ಶಾಲಾ ವಾಹನಗಳ ಸುರಕ್ಷತೆಗೆ ಆದ್ಯ ಗಮನಹರಿಸಬೇಕು ಎಂದು ಶಿವರಾಜ್‌ಪಾಟೀಲ್‌ರವರು ಸಲಹೆ ನೀಡುತ್ತಾರೆ.
ವಾಹನ ಮುಟ್ಟುಗೋಲು, ಕೇಸ್ ದಾಖಲು: ಶಿವರಾಜ್ ಪಾಟೀಲ್
ವಿ
ದ್ಯಾರ್ಥಿಗಳನ್ನು ಕರೆದೊಯ್ಯುವ ಶಾಲಾ ವಾಹನಗಳು ಸರಕಾರ ರೂಪಿಸಿರುವ ಸುರಕ್ಷತಾ ನಿಯಮಾವಳಿಗಳ ಕಟ್ಟುನಿಟ್ಟಿನ ಪಾಲನೆ ಮಾಡಬೇಕು. ಸ್ಪೀಡ್ ಗರ್ವನರ್, ಜಿಪಿಎಸ್, ಸಿ.ಸಿ.ಕ್ಯಾಮರಾ ಅಳವಡಿಕೆ ಮಾಡಬೇಕು. ಇಲ್ಲದಿದ್ದರೆ ಇಂತಹ ವಾಹನಗಳ ಆರ್‌ಸಿಬುಕ್ ಸೀಝ್‌ಮಾಡಲಾಗುವುದು. ಹಾಗೆಯೇ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನು ರೀತಿಯ ಕ್ರಮ ಜರಗಿಸಲಾಗುವುದು ಪ್ರಾದೇಶಿಕ ರಸ್ತೆ ಸಾರಿಗೆ ಅಧಿಕಾರಿ (ಆರ್.ಟಿ.ಒ.) ಶಿವರಾಜ್ ಪಾಟೀಲ್‌ರವರು ಸ್ಪಷ್ಟಪಡಿಸಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಖಾಸಗಿ ವಾಹನಗಳ ಮಾಲಕರು ಕೂಡ ನಿಯಮಾವಳಿಗಳ ಕಟ್ಟುನಿಟ್ಟಿನ ಪಾಲನೆ ಮಾಡಬೇಕು. ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ವಾಹನಗಳಲ್ಲಿ ಕರೆದೊಯ್ಯಬಾರದು. ನಿಯಮಾವಳಿ ಉಲ್ಲಂಘಿಸಿ ಸಂಚರಿಸುವ ಶಾಲಾ ವಾಹನಗಳ ಮೇಲೆ ಕೇಸ್ ದಾಖಲಿಸುವ, ಶಿಸ್ತುಕ್ರಮ ಜರಗಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ಆರ್.ಟಿ.ಒ. ಮಾಹಿತಿ ನೀಡಿದ್ದಾರೆ.







