ನೂತನ ಮೇಲ್ಮನೆ ಸದಸ್ಯರ ಪ್ರಮಾಣ ವಚನ

ಬೆಂಗಳೂರು, ಜೂ. 22: ಇತ್ತೀಚೆಗೆ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್‌ನ ರಿಝ್ವೆನ್ ಅರ್ಷದ್, ಆರ್.ಬಿ. ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ವೀಣಾ ಅಚ್ಚಯ್ಯ ಹಾಗೂ ಬಿಜೆಪಿಯ ಲೇಹರ್ ಸಿಂಗ್ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬುಧವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಲ್ಮನೆಯ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಸಮ್ಮುಖದಲ್ಲಿ ಐದು ಮಂದಿ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ವೀಣಾ ಅಚ್ಚಯ್ಯ ಕೊಡಗಿನ ‘ಕಾವೇರಿ ದೇವಿ’ಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಉಳಿದ ಸದಸ್ಯರಿಗೆ ದೇವರ ಹೆಸರಿನಲ್ಲಿ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಈ ವೇಳೆ ಸಭಾಪತಿ ಶಂಕರಮೂರ್ತಿ ನೂತನ ಸದಸ್ಯರಾಗಿ ಹಸ್ತಲಾಘವ ನೀಡಿ ಅಭಿನಂದಿಸಿದ್ದಲ್ಲದೆ, ಸದನದ ನಡವಳಿಗೆ ಸಂಬಂಧಿಸಿದ ಮಾಹಿತಿ ಪುಸ್ತಕಗಳನ್ನು ನೀಡಿ ಉತ್ತಮ ರೀತಿ ಕಲಾಪಗಳಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಿದರು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸದಸ್ಯರ ಬಂಧುಗಳು, ಅಭಿಮಾನಿಗಳು ನೂತನ ಸದಸ್ಯರಿಗೆ ಪುಷ್ಪಗುಚ್ಛ, ಹಸ್ತಲಾಘವ ನೀಡಿ ಶುಭ ಕೋರಿದರು. ಈ ವೇಳೆ ಸದಸ್ಯರು ಅಭಿಮಾನಿಗಳಿಗೆ ಸಿಹಿ ಹಂಚುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದರು.





