ಕ್ಷೇತ್ರದ ಜನತೆ ಬಯಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ

ಬೆಂಗಳೂರು, ಜೂ. 22: ಕ್ಷೇತ್ರದ ಜನತೆ ಹಾಗೂ ನನ್ನ (ಕೋಲಿ, ಕಬ್ಬಲಿಗ, ಗಂಗಮತಸ್ಥ) ಜನಾಂಗ ಬಯಸಿದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ಜನತೆ ಯೊಂದಿಗೆ ಸಮಾಲೋಚನೆ ನಡೆಸಿ ಅವರು ಇಚ್ಛಿಸಿದರೆ ಪಕ್ಷವನ್ನು ತೊರೆಯಲು ಸಿದ್ಧ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಬಿಜೆಪಿಯವರ ಅಗತ್ಯವಿಲ್ಲ. ಕಾಂಗ್ರೆಸಿಗರೆ ಸಾಕು ಎಂದು ಟೀಕಿಸಿದರು.
ತನ್ನನ್ನು ಸಚಿವ ಸಂಪುಟದಿಂದ ಕೈಬಿಡುವ ಮೂಲಕ ರಾಜ್ಯದಲ್ಲಿನ ಕೋಲಿ, ಕಬ್ಬಲಿಗ, ಗಂಗಮತಸ್ಥ ಹಾಗೂ ಬೆಸ್ತ ಜನಾಂಗವನ್ನು ತಬ್ಬಲಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನನಗಿರುವ ಜನಬೆಂಬಲದ ಅರಿವು ಮುಖ್ಯಮಂತ್ರಿ ಸಿದ್ದರಾಮನ್ಯವರಿಗೂ ಗೊತ್ತು ಎಂದು ಹೇಳಿದರು.
ನನಗಿರುವ ಜನ ಬೆಂಬಲವನ್ನು ಅರಿತಿದ್ದ ವೀರೇಂದ್ರ ಪಾಟೀಲ್ ನನ್ನನ್ನು ಕರೆದು ಟಿಕೆಟ್ ನೀಡಿದ್ದರು. ಜನ ಬೆಂಬಲವುಳ್ಳ ನನ್ನನ್ನು ಸಂಪುಟದಿಂದ ಕೈಬಿಡುವ ಮೂಲಕ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದ ಅವರು, ಮಲ್ಲಿಕಾರ್ಜುನ ಖರ್ಗೆ ನನಗೆ ಗುರು ಎಂದು ಹೇಳಿದರು.





